ಉಕ್ರೇನ್‌ನಿಂದ ಮರಳಿ ವಿದ್ಯಾರ್ಥಿಗಳು ದ.ಕ.ಜಿಲ್ಲಾಧಿಕಾರಿ ಭೇಟಿ

ಮಂಗಳೂರು, ಮಾ.7: ಉಕ್ರೇನ್‌ನಿಂದ ಆಗಮಿಸಿದ ಜಿಲ್ಲೆಯ ವಿದ್ಯಾರ್ಥಿಗಳಾದ ಅನನ್ಯಾ ಅನ್ನಾ, ಕ್ಲಾಟಸ್ ಒಸ್ಮಂಡ್ ಡಿಸೋಜ, ಅಹ್ಮದ್ ಸಾದ್ ಅರ್ಷದ್, ಲಕ್ಷಿತಾ ಪುರುಷೊತ್ತಮ, ಶಲ್ವಿನ್ ಪ್ರೀತಿ ಅರ್ನಾ ಸೋಮವಾರ ದ.ಕ.ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಜಿಲ್ಲಾಧಿಕಾರಿ ಹೂಗುಚ್ಛ ಹಾಗೂ ಪುಸ್ತಕ ನೀಡಿ ಸ್ವಾಗತಿಸಿ ದರು. ಈ ಸಂದರ್ಭ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಜಿಲ್ಲಾಧಿಕಾರಿ ಜೊತೆ ಹಂಚಿಕೊಂಡರು. ಅಲ್ಲದೆ ಯುದ್ಧಪೀಡಿತ ಉಕ್ರೇನ್‌ನಿಂದ ಕರೆತರುವಲ್ಲಿ ಜಿಲ್ಲಾಧಿಕಾರಿ ವಹಿಸಿದ ಪಾತ್ರದ ಬಗ್ಗೆ ವಿದ್ಯಾರ್ಥಿಗಳು ಸ್ಮರಿಸಿಕೊಂಡರು.
ವಿದ್ಯಾರ್ಥಿಗಳು ಮನೆಗೆ ಹೋಗದೆ ವಿಮಾನ ನಿಲ್ದಾಣದಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಯೊಂದಿಗೆ ಕೇಕ್ ಕತ್ತರಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭ ವಿದ್ಯಾರ್ಥಿಗಳ ಪೋಷಕರು ಕೂಡ ಉಪಸ್ಥಿತರಿದ್ದರು.
ದ.ಕ.ಜಿಲ್ಲೆ; ಉಕ್ರೇನ್‌ನಿಂದ ಬರಲು ಒಬ್ಬ ವಿದ್ಯಾರ್ಥಿ ಮಾತ್ರ ಬಾಕಿ
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ದ.ಕ.ಜಿಲ್ಲೆಯ 18 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಮಾತ್ರ ಬರಲು ಬಾಕಿಯಾಗಿದ್ದು, ಅವರೀಗ ರೊಮಾನಿಯಾದ ಗಡಿ ತಲುಪಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾಹಿತಿ ನೀಡಿದ್ದಾರೆ.
ಭಾರತ ಸರಕಾರದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಹೀನಾ ಫಾತಿಮಾ, ಡೇಲ್ ಅಂದ್ರಾದೆ ಲುವಿಸ್, ಜೆ.ಅನುಷಾ ಭಟ್, ಪ್ರಣವ್ ಕುಮಾರ್ ಎಸ್., ಲಾಯ್ಡಾ ಆ್ಯಂಟನಿ ಪಿರೇರಾ, ಅನೈನಾ ಅನ್ನಾ, ಕ್ಲೇಟನ್ ಓಸ್ಮಂಡ್ ಡಿಸೋಜ, ಅಹ್ಮದ್ ಸಾದ್ ಅರ್ಷದ್, ಶಲ್ವಿನ್ ಪ್ರೀತಿ ಅರಾನ್ಹಾ, ಸಾಕ್ಷಿ ಸುಧಾಕರ್ , ಪ್ರೀತಿ ಪೂಜಾರಿ , ಪೂಜಾ ಮಲ್ಲಪ್ಪ ಅತಿವಾಳ್, ಪೃಥ್ವಿರಾಜ್ ಭಟ್ ಮನೆ ತಲುಪಿದ್ದಾರೆ.
ನೈಮಿಶಾ ಮತ್ತು ಮುಹಮ್ಮದ್ ಮಿಸಾಲ್ ಅರೀಫ್ ಹೊಸದಿಲ್ಲಿಗೆ, ಅಂಶಿತಾ ರೆಶಾಲ್ ಪದ್ಮಶಾಲಿ ಮುಂಬೈಗೆ, ಲಕ್ಷಿತಾ ಪುರುಷೋತ್ತಮ್ ಬೆಂಗಳೂರು ತಲುಪಿದ್ದಾರೆ.