ಮೈಸೂರು: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ 'ಜಾನಾಂದೋಲನ ಮಹಾಮೈತ್ರಿ' ಪೋಸ್ಟರ್ ಬಿಡುಗಡೆ
ಮಾ.15 ರಂದು ಬೆಂಗಳೂರಿನಲ್ಲಿ ಸಮಾವೇಶ: ಪ.ಮಲ್ಲೇಶ್

ಮೈಸೂರು,ಮಾ.7: ರಾಜ್ಯದಲ್ಲಿರುವ ಮೂರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಜನಾಂದೋಲನಗಳ ಮಹಾಮೈತ್ರಿಯು ಜನಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ ಸಮಾವೇಶ ನಡೆಸಲಿದೆ ಎಂದು ಸಮಿತಿಯ ಸದಸ್ಯರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಜನಾಂದೋಲನಗಳ ಮಹಾಮೈತ್ರಿಯು ರೈತವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಸಲುವಾಗಿ ಮಾಡುತ್ತಿರುವ ಜಾಥಾದ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಮುಖಂಡ ಪ.ಮಲ್ಲೇಶ್ ಮಾತನಾಡಿ, ರೈತರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಈಗಾಗಲೇ ಮೂರು ರೈತ ವಿರೋಧಿ ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯ ಸರ್ಕಾರ ಆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯದೆ ಮುಂದುವರಿಸಿರುವುದನ್ನು ಖಂಡಿಸಿದರು.
ಜನವಿರೋಧಿ ಮತ್ತು ರೈತವಿರೋಧಿಯಾಗಿರುವ ಕರ್ನಾಟಕ ಭೂ ಸುಧಾರಣಾ(ತಿದ್ದುಪಡಿ) ಕಾಯಿದೆ 2020, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ನಿಯಂತ್ರಣ ಅಭಿವೃದ್ಧಿ) ಕಾಯಿದೆ 2020, ಕರ್ನಾಟಕ ಜಾನುವಾರು ಹತ್ಯಾ(ನಿಷೇಧ ಮತ್ತು ಸಂರಕ್ಷಣೆ) 2020 ಈ ಕಾಯ್ದೆಗಳನ್ನು ಕರ್ನಾಟಕ ಸರ್ಕಾರ ಹಿಂಪಡೆಯುವಂತೆ ಆಗ್ರಹಿಸಿ ಮಾರ್ಚ್.09 ರಿಂದ ಮಹದೇಶ್ವರ ಬೆಟ್ಟದಿಂದ ಜಾಥಾವನ್ನು ಆರಂಭಿಸಿ, ಕೊಳ್ಳೇಗಾಲದಲ್ಲಿ ಜನಾ ಜಾಗೃತಿ ಜಾಥಾದ ಕಾರ್ಯಕ್ರಮವನ್ನು ಮಾಡಿ ನಂತರ ಮಾರ್ಚ್.10 ರಂದು ಚಾಮರಾಜನಗರ, ಮಾರ್ಚ್.11 ರಂದು ಗುಂಡ್ಲುಪೇಟೆ ಮತ್ತು ಹೆಚ್.ಡಿ.ಕೊಟೆ, ಮಾರ್ಚ್.12 ರಂದು ಹುಣಸೂರು ಮತ್ತು ಕೆ.ಆರ್.ನಗರ, ಮಾರ್ಚ್.13 ರಂದು ಮೈಸೂರು, ಮಾರ್ಚ್.14 ರಂದು ಕೆ.ಆರ್.ಪೇಟೆ ಮತ್ತು ರಾಮನಗರದಲ್ಲಿ ಜನ ಜಾಗೃತಿ ಜಾಥಾದ ಕಾರ್ಯಕ್ರಮವನ್ನು ನಡೆಸಿ ನಂತರ ಮಾ.15 ರಂದು ಬೆಂಗಳೂರನ್ನು ತಲುಪಿ ಅಲ್ಲಿ ಸಮಾವೇಶ ಮಾಡುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ, ರೈತ ಸಂಘದ ಹೊಸಕೋಟೆ ಬಸವರಾಜು, ಕಾಮಿರ್ಕ ಮುಖಂಡ ಚಂದ್ರಶೇಖರ್ ಮೇಟಿ, ಸೀಮಾ, ಅಭಿರುಚಿ ಗಣೇಶ್ ಉಪಸ್ಥಿತರಿದ್ದರು.







