ಮಂಗಳೂರು ವಕೀಲರ ಸಂಘದ ಕ್ರೀಡಾಕೂಟ; ಕ್ರಿಕೆಟ್ ಪಂದ್ಯದಲ್ಲಿ ನ್ಯಾಯಾಧೀಶರ ತಂಡಕ್ಕೆ ಜಯ

ಮಂಗಳೂರು, ಮಾ.7:ಮಂಗಳೂರು ವಕೀಲರ ಸಂಘದ ವತಿಯಿಂದ ನಗರ ಹೊರವಲಯದ ಅಡ್ಯಾರ್‌ನಲ್ಲಿರುವ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಇತ್ತೀಚೆಗೆ ವಾರ್ಷಿಕ ಕ್ರೀಡಾಕೂಟ ನಡೆಯಿತು.
ದ.ಕ.ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮುರಳೀಧರ್ ಪೈ ಕ್ರೀಡಾಕೂಟ ಉದ್ಘಾಟಿಸಿದರು. ನ್ಯಾಯಾಧೀಶರು ಹಾಗೂ ಹಿರಿಯ ವಕೀಲರ ನಡುವೆ ನಡೆದ ಉದ್ಘಾಟನಾ ಕ್ರಿಕೆಟ್ ಪಂದ್ಯದಲ್ಲಿ ನ್ಯಾಯಧೀಶರ ತಂಡ ಜಯಗಳಿಸಿದೆ.
ಬಳಿಕ ವಕೀಲರ ತಂಡದ ನಡುವೆ ಕ್ರಿಕೆಟ್ ಪಂದ್ಯಾಟ ಹಾಗೂ ಮಹಿಳಾ ವಕೀಲರ ನಡುವೆ ಥ್ರೋಬಾಲ್ ಪಂದ್ಯಾಟ ನಡೆಯಿತು. ಕ್ರಿಕೆಟ್‌ನಲ್ಲಿ ಎಂಟು ವಕೀಲರ ತಂಡ ಭಾಗವಹಿಸಿದ್ದು, ಥ್ರೋಬಾಲ್ನಲ್ಲಿ ಮೂರು ಮಹಿಳಾ ತಂಡ ಭಾಗವಹಿಸಿತ್ತು. ಈ ಸಂದರ್ಭ ಹಗ್ಗ ಜಗ್ಗಟ, ಮ್ಯೂಸಿಕಲ್ ಚೇರ್ ಸ್ಪರ್ಧೆ ಏರ್ಪಡಿಸಲಾಯಿತು.
ಕ್ರಿಕೆಟ್ ಪಂದ್ಯದಲ್ಲಿ ರಾಘವೇಂದ್ರ ಎಚ್ ವಿ, ಇಸ್ಮಾಯಿಲ್ ಎಸ್., ದೇವಿಪ್ರಕಾಶ್ ಹೆಗ್ಡೆ ನಾಯಕತ್ವದ ಡೆರ್ಬಿ ಸೂಪರ್ ಕಿಂಗ್ಸ್ ತಂಡ ಪ್ರಥಮ ಹಾಗೂ ದಿನಕರ್ ಶೆಟ್ಟಿ, ನಾರಾಯಣ ಲಮಾಣಿ ನಾಯಕತ್ವದ ಬಾರ್ ಲಯನ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ಥ್ರೋ ಬಾಲ್ ಪಂದ್ಯದಲ್ಲಿ ಜಯಶ್ರೀ ರಟ್ಟೀಹಳ್ಳಿಯ ನಾಯಕತ್ವದ ಪಿಂಕ್ ಪ್ಯಾಂಥರ್ ತಂಡ ಪ್ರಥಮ, ಮುಹಮ್ಮದ್ ಅಸ್ಗರ್ ನಾಯಕತ್ವದ ಬಾರ್ ಸ್ಟ್ರೈಕರ್ಸ್ ತಂಡ ದ್ವಿತೀಯ ಹಾಗೂ ವೈಟ್ ಟೈಗರ್ಸ್ ತಂಡ ತೃತಿಯ ಬಹುಮಾನ ಗಳಿಸಿದೆ.
ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ, ಉಪಾಧ್ಯಕ್ಷ ಬಿ. ಜಿನೇಂದ್ರ ಕುಮಾರ್, ಜೊತೆ ಕಾರ್ಯದರ್ಶಿ ಶರ್ಮಿಳಾ, ಕೋಶಾಧಿಕಾರಿ ಅರುಣಾ ಬಿ.ಪಿ, ಹಿರಿಯ ವಕೀಲರಾದ ಬಿ. ಇಬ್ರಾಹಿಂ, ಟಿ.ಎನ್. ಪೂಜಾರಿ, ಎಂ.ಆರ್. ಬಲ್ಲಾಳ್, ಎಸ್‌ಕೆ ಉಳ್ಳಾಲ್, ಕೆಎಸ್ ಶರ್ಮ, ಜಗದೀಶ್ ಶೇಣವ, ಪೃಥ್ವಿರಾಜ್ ರೈ ಮತ್ತಿತರರು ಉಪಸ್ಥಿತರಿದ್ದರು.