ಕಿಟ್ಟೆಲ್ ಅವರ ಶಿಕ್ಷಣ ಪದ್ಧತಿ ಇಂದಿಗೂ ಪ್ರಸ್ತುತ-ಡಾ.ಪಾದೆಕಲ್ಲು ವಿಷ್ಣುಭಟ್
ಅಖಿಲ ಕರ್ನಾಟಕ 18ನೇ ಹಸ್ತಪ್ರತಿ ಸಮ್ಮೇಳನ ಸಮಾರೋಪ

ಪುತ್ತೂರು: ಕಿಟ್ಟೆಲ್ ಅವರ ಶಿಕ್ಷಣ ಪದ್ಧತಿ ಇಂದಿಗೂ ಪ್ರಸ್ತುತವಾಗಿದ್ದು, ಅವರು ರಚಿಸಿದ ನಿಘಂಟಿನ ಸಾಧನೆ, ಕಾಲ ಕಾಲಕ್ಕೆ ಹುಟ್ಟಿಕೊಳ್ಳುವ ಶಬ್ದಗಳನ್ನು ಕಿಟ್ಟೆಲ್ ನಿಘಂಟಿನಲ್ಲಿ ಸೇರಿಸಿ ಮುನ್ನಡೆಸುವುದು ಇದಕ್ಕೆ ಕಾರಣ ವಾಗಿದೆ ಎಂದು ಉಡುಪಿಯ ಹಿರಿಯ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣುಭಟ್ ಹೇಳಿದರು.
ಅವರು ರವಿವಾರ ಹಂಪಿ ಕನ್ನಡ ವಿಶ್ವವಿದ್ಯಾಲಯಯ ಹಸ್ತಪ್ರತಿ ವಿಭಾಗ ಹಾಗೂ ಪುತ್ತೂರಿನ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‍ಮೆಂಟ್ ಸ್ಟಡೀಸ್ ಸಹಯೋಗದಲ್ಲಿ ನಡೆದ ಅಖಿಲ ಕರ್ನಾಟಕ 18ನೇ ಹಸ್ತಪ್ರತಿ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದರು. ಹಸ್ತಪ್ರತಿ ರಚನೆಕಾರರ ಚಿಂತನೆ ಬದಲು ಸಮಕಾಲೀನರ ಕುರಿತಂತೆ ಚಿಂತನೆ ನಡೆಯಬೇಕಾಗಿದೆ ಎಂದು ಆಶಿಸಿದರು.
18ನೇ ಹಸ್ತಪ್ರತಿ ಸಮ್ಮೇಳನಾಧ್ಯಕ್ಷ ಪ್ರೊ.ಎ.ವಿ.ನಾವಡ ಮಾತನಾಡಿ, ಹಸ್ತಪ್ರತಿ ಶಾಸ್ತ್ರ ಪಳಿಯುಳಿಕೆ ಅಲ್ಲ. ಬದಲಾಗಿ ಕಾಲದಿಂದ ಕಾಲಕ್ಕೆ ಸಾಗುವ ಹಸ್ತಪ್ರತಿ ಶಾಸ್ತ್ರ. ಪಠ್ಯದಿಂದ ಶಾಸ್ತ್ರಗಳ ಕಡೆಗೆ ಚಲಿಸಬೇಕೆ ಹೊರತು ಶಾಸ್ತ್ರಗಳಿಂದ ಪಠ್ಯ ಕಡೆಗೆ ಅಲ್ಲ. ಈ ನಿಟ್ಟಿನಲ್ಲಿ ಜ್ಞಾನಗಾರಿಕೆ ಬೆಳೆಸುವ ಹೊಣೆಗಾರಿಕೆ ಕನ್ನಡ ವಿಶ್ವ ವಿದ್ಯಾನಿಲಯಕ್ಕಿದೆ ಎಂದ ಅವರು, ಪುತ್ತೂರಿನಲ್ಲಿ ಕಿಟ್ಟೆಲ್ ಟ್ರಸ್ಟ್ ರಚನೆಯಾಗಬೇಕು ಎಂಬ ಹಕ್ಕೊತ್ತಾಯವನ್ನು ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಮಾತನಾಡಿ, ಹಸ್ತಪ್ರತಿ ಪಂಡಿತ ಪರಂಪರೆಯ ಅಮೂಲ್ಯ ಸಾಹಿತ್ಯ ಭಂಡಾರ. ಇದನ್ನು ಕಾಪಾಡಿಕೊಳ್ಳುವ ಜತೆಗೆ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಆಗಬೇಕು. ಇದಕ್ಕೆ ಇಂತಹಾ ಸಮ್ಮೇಳದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಸೂಕ್ತ ಎಂದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ವೆ.ವಿಜಯ ಹಾರ್ವಿನ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ಕರ್ನಾಟಕ ತಿಯೋಲಾಜಿಕಲ್ ಕಾಲೇಜಿನ ಪತ್ರಗಾರ ಸಹಾಯಕ ಬೆನೆಟ್ ಜಿ.ಅಮ್ಮನ್ನ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಕೃತಿ ಪ್ರತಿಷ್ಠಾನದ ಸಂಶೋಧಕ ಡಾ.ಎಸ್.ಆರ್.ವಿಘ್ನರಾಜ ಧರ್ಮಸ್ಥಳ ಅವರನ್ನು ಪ್ರೊ.ಎ.ವಿ.ನಾವಡ ಸನ್ಮಾನಿಸಿದರು. ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‍ಮೆಂಟ್ ಸ್ಟಡೀಸ್ ವತಿಯಿಂದ ಹಂಪಿ ಹಸ್ತಪ್ರತಿ ಶಾಸ್ತ್ರ ವಿಭಾಗಕ್ಕೆ ಕಿಟ್ಟೆಲ್ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು.
ಹಂಪಿ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಫ್.ಟಿ.ಹಳ್ಳಿಕೇರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುದಾನ ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಸ್ವಾಗತಿಸಿದರು. ಸುದಾನ ಕಿಟ್ಟೆಲ್ ಸೆಂಟರ್ ನಿರ್ದೇಶಕ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ವಂದಿಸಿದರು. ಶಿಕ್ಷಕಿ ಕವಿತಾ ಅಡೂರು ಕಾರ್ಯಕ್ರಮ ನಿರೂಪಿಸಿದರು.







