ಬೊಮ್ಮಾಯಿಯನ್ನು ಬದಲಾಯಿಸಿ ನೀನೇ ಮುಖ್ಯಮಂತ್ರಿಯಾಗಪ್ಪ: ಯತ್ನಾಳ್ ಕಾಲೆಳೆದ ಸಿದ್ದರಾಮಯ್ಯ

ಬೆಂಗಳೂರು, ಮಾ.7: ರಾಜ್ಯ ಬಜೆಟ್ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಶಿಕಾರಿಪುರ(ಯಡಿಯೂರಪ್ಪ ಪ್ರತಿನಿಧಿಸುವ ಕ್ಷೇತ್ರ) ಬಿಟ್ಟರೆ ಬಾದಾಮಿ ಕ್ಷೇತ್ರ(ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರ)ದ ಅಭಿವೃದ್ಧಿಗೆ ಹೆಚ್ಚು ಅನುದಾನ ಸಿಕ್ಕಿದೆಯಲ್ಲ ಸರ್ ಎಂದು ಕಾಲೆಳೆದರು.
ಆಗ ಮಾತನಾಡಿದ ಸಿದ್ದರಾಮಯ್ಯ, ಈ ಬಜೆಟ್‍ನಲ್ಲಿ ಎಲ್ಲಿ ನೋಡಿದರೂ ‘ಹಾವೇರಿ-ಶಿಗ್ಗಾಂವ್’(ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರ) ಅಂತ ಇದೆ. ನೀನು ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗಪ್ಪ ಯತ್ನಾಳ್. ಆಗ ಬಜೆಟ್‍ನಲ್ಲಿ ಬಿಜಾಪುರಕ್ಕೆ ಅನುದಾನ ತೆಗೆದುಕೊಂಡು ಹೋಗು ಎಂದು ಕಾಲೆಳೆದರು.
ಈ ವೇಳೆ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಈಗ ತಾನೇ ಅವರು ಶಾಂತವಾಗಿದ್ದಾರೆ. ನೀವು ಮತ್ತೆ ಅವರನ್ನು ಪ್ರಚೋದಿಸುತ್ತಿದ್ದೀರಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಈ ಹಾಲಿ ಹಾಗೂ ಮಾಜಿ ಸಿಎಂಗಳ ನಡುವಿನ ಹೊಂದಾಣಿಕೆ, ಅಹೋರಾತ್ರಿ ಗಪ್‍ಚುಕ್ ಸಭೆಗಳು ನಡೆದು ಎಲ್ಲ ತೀರ್ಮಾನಗಳು ಆಗುತ್ತವೆ. ನಮಗೆ ಏನು ಸಿಗಲ್ಲ ಎಂದರು.





