ಅಮೃತಮಹಲ್ ಹುಲ್ಲುಗಾವಲು ಒತ್ತುವರಿ: ಪರಿಶೀಲಿಸಿ ವರದಿ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು, ಮಾ.7: ಚಿಕ್ಕಮಗಳೂರು ಜಿಲ್ಲೆಯ ಅಮೃತ್ ಮಹಲ್ ಕಾವಲ್ ಜಮೀನು ಒತ್ತುವರಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ಸಲ್ಲಿಸಲು ಹೈಕೋರ್ಟ್ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
ಒತ್ತುವರಿ ತೆರವು ಕೋರಿ ವೈಲ್ಡ್ ಲೈಫ್ ಕನ್ಸರ್‍ವೇಷನ್ ಆಕ್ಷನ್ ಟೀಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಮೃತ್ ಮಹಲ್ ಕಾವಲು ಸಂರಕ್ಷಿತ ಅರಣ್ಯ ಪ್ರದೇಶ ಸೇರಿದಂತೆ ಒತ್ತುವರಿಯಾಗಿರುವ ಸರಕಾರಿ ಜಮೀನಿನ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು. ಒತ್ತುವರಿ ತೆರವಿಗೆ ವಿಶೇಷ ಕಾರ್ಯಪಡೆ ರಚಿಸಿ ಆ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಅರಣ್ಯ ಇಲಾಖೆ ಪ್ರಧಾನ ಕಾಯದರ್ಶಿಗೆ ಹೈಕೋರ್ಟ್ 2018ರ ಡಿ.2ರಂದು ನಿರ್ದೇಶಿಸಿತ್ತು.
ಈ ಆದೇಶ ಪಾಲಿಸಲು ನ್ಯಾಯಾಲಯದಿಂದ ಪದೇ ಪದೆ ಕಾಲಾವಕಾಶ ಪಡೆದಿದ್ದ ಅಧಿಕಾರಿಗಳು, 2021ರ ನ. 26ರಂದು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬದಲಾಗಿ ಪಶು ಸಂಗೋಪನಾ ಇಲಾಖೆ ಅಮೃತ್‍ಮಹಲ್ ಕಾವಲ್ ಜಾನುವಾರು ಸಂತಾನೋತ್ಪತ್ತಿ ಕೇಂದ್ರದ ಉಪ ನಿರ್ದೇಶಕರು ಪ್ರಮಾಣ ಪತ್ರ ಸಲ್ಲಿಸಿದ್ದರು.
ಚಿಕ್ಕಮಗಳೂರಿನಲ್ಲಿ ಸುಮಾರು 4,266 ಎಕರೆ ಸರಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪವಿದ್ದರೂ, ದೇವನೂರು ಮತ್ತು ಬಾಸೂರು ಕಾವಲ್‍ನಲ್ಲಿ ಯಾವುದೇ ಒತ್ತುವರಿ ನಡೆದಿಲ್ಲ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ. ಆದರೆ, ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿಲ್ಲ. ಅಧಿಕಾರಿಗಳಿಗೆ ಮಾಸಿಕ 25 ಎಕರೆ ಒತ್ತುವರಿ ತೆರವುಗೊಳಿಸಲು ಗುರಿ ನೀಡಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ. ಆದರೂ ತೆರವುಗೊಳಿಸಿಲ್ಲ ಎಂದ ಹೈಕೋರ್ಟ್ ನ್ಯಾಯಪೀಠ, ಸ್ಥಳಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.







