ಉಕ್ರೇನ್ ನಿಂದ ಪಾರಾಗಿ ಬಂದವರಿಗೆ ಸಾಂತ್ವನ ಹೇಳದೇ, ಸಿಂದಿಯಾ ಪ್ರಚಾರ ಭಾಷಣ ಮಾಡುತ್ತಿದ್ದರು: ರೊಮೇನಿಯಾ ಮೇಯರ್
"ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಕ್ಕೆ ಇಂತಹ ಬೆದರಿಕೆಗಳನ್ನು ತಾನು ನಿರೀಕ್ಷಿಸಿರಲಿಲ್ಲ"

ಹೊಸದಿಲ್ಲಿ: ಕಳೆದ ವಾರ ರೊಮೇನಿಯಾದಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾರನ್ನು ತರಾಟೆಗೆಳೆದು ಸುದ್ದಿಯಾಗಿದ್ದ ಸ್ನಾಗೋವ್ ನಗರದ ಮೇಯರ್ ಮಿಹಾಯ್ ಆ್ಯಂಗೆಲ್, ಭಾರತದ ವಿದ್ಯಾರ್ಥಿಗಳ ಪರವಹಿಸಿ ಸಚಿವ ಸಿಂಧಿಯಾ ಅವರನ್ನು ಪ್ರಶ್ನಿಸಿದ ಮೇಲೆ ತನಗೆ ಭಾರತದ ಸಾಮಾಜಿಕ ಜಾಲತಾಣ ಖಾತೆಗಳಿಂದ ಬೆದರಿಕೆಗಳು ಬರುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ.
ಪೇಯ್ಡ್ ಟ್ರೋಲ್‌ಗಳಿಂದ ಹಾಗೂ ದ್ವೇಷ ಸಂದೇಶಗಳಿಂದ ನನ್ನ ಅಧಿಕೃತ ಪೇಜ್ ತುಂಬಿಹೋಗಿದೆ. ನಾನಿದನ್ನು ನಿಭಾಯಿಸಬಲ್ಲೆ. ಆದರೆ ವಿದೇಶಿಯರಿಂದ ದ್ವೇಷ ಸಂದೇಶಗಳನ್ನು ಸ್ವೀಕರಿಸುತ್ತಿರುವುದು ಇದೇ ಮೊದಲು. ವಿದ್ಯಾರ್ಥಿಗಳಿಗೆ ಅನುಕಂಪ ತೋರಿಸಿದ್ದಕ್ಕಾಗಿ ಇಂತಹ ಬೆದರಿಕೆಗಳನ್ನು ತಾನು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ತನ್ನನ್ನು ಸಂಪರ್ಕಿಸಿದ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಮೇಯರ್ ಆ್ಯಂಗೆಲ್ ʼತಾನು ರಾಜಕೀಯ ಹಗರಣವನ್ನು ಸೃಷ್ಟಿಸಲು ಬಯಸಿರಲಿಲ್ಲ ಮತ್ತು ತಾವೆಂದು ಮನೆಗೆ ಮರಳುತ್ತೇವೆ ಎನ್ನುವುದನ್ನಷ್ಟೇ ತಿಳಿಯಲು ಬಯಸಿದ್ದ ಭಾರತೀಯ ವಿದ್ಯಾರ್ಥಿಗಳ ಜೊತೆಯಲ್ಲಿ ನಿಂತಿದ್ದೆʼ ಎಂದು ಸ್ಪಷ್ಟಪಡಿಸಿದ್ದಾರೆ.
ʼರೊಮೇನಿಯಾದ ತಂಡವು 157 ಭಾರತೀಯ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಿತ್ತು ಹಾಗೂ ಸ್ನಾಗೊವ್ನ ಜನರು ಅವರಿಗೆ ಆಹಾರ ಮತ್ತು ಇತರ ಅಗತ್ಯಗಳನ್ನು ಒದಗಿಸಿದ್ದರು ಎಂದೂ ಅವರು ತಿಳಿಸಿದ್ದಾರೆ.
ಆದಾಗ್ಯೂ,ಕ್ಯಾಮೆರಾಗಳೊಂದಿಗೆ ಸಜ್ಜಾಗಿ ಬಂದಿದ್ದ ಸಿಂದಿಯಾ ಭಾರತೀಯರಿಗೆ ಸ್ವದೇಶಕ್ಕೆ ವಿಮಾನಯಾನದ ಕುರಿತು ವಿವರಗಳನ್ನು ನೀಡುವ ಬದಲು ತಾವು (ಭಾರತ ಸರಕಾರ) ನಾಯಿಗಳನ್ನು ರಕ್ಷಿಸಿದ್ದರ ಬಗ್ಗೆ ಹಾಗೂ ತಾನು ಮಾಡಿದ್ದ ಕಾರ್ಯಗಳ ಬಗ್ಗೆ ಮಾತನಾಡಿದ್ದು ಆ್ಯಂಗೆಲ್‌ನ್ನು ಕೆರಳಿಸಿದ್ದು ಸ್ಪಷ್ಟವಾಗಿತ್ತು.
ಅ
ವರು (ಸಿಂದಿಯಾ) ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್)ಯ ಭಾಷಣಕ್ಕೆ ಸಜ್ಜಾಗಿದ್ದಂತಿದ್ದರೇ ಹೊರತು ಯುದ್ಧರಂಗದಿಂದ ಪಾರಾಗಿ ತಾಯ್ನಾಡಿಗೆ ಮರಳಲು ಬಯಸಿದ್ದ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳುವಂತಲ್ಲ ಎಂದು ಆ್ಯಂಗೆಲ್ ಕಿಡಿ ಕಾರಿದ್ದಾರೆ.
‘ಈ ಮಕ್ಕಳನ್ನು ಗಡಿಯಲ್ಲಿ ಘನತೆಯಿಂದ ನಡೆಸಿಕೊಂಡಿರಲಿಲ್ಲ, ಸಿಂದಿಯಾರ ಭಾಷಣ ಅದಕ್ಕೆ ಹೆಚ್ಚುವರಿಯಾಗಿತ್ತು. ಅದು ನಿಜಕ್ಕೂ ತನ್ನನ್ನು ಕೆರಳಿಸಿತ್ತು. ಅವರು ವಿದ್ಯಾರ್ಥಿಗಳಿಗೆ ಯಾವುದೇ ಅಗತ್ಯಗಳನ್ನು ಒದಗಿಸಿರಲಿಲ್ಲ ಮತ್ತು ಇಲ್ಲಿಗೆ ಬಂದಿದ್ದರು. ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲು ವಿಮಾನಯಾನದ ಕುರಿತು ತಾನು ಪ್ರಶ್ನಿಸಿದಾಗ ತನ್ನೊಂದಿಗೆ ಅಗೌರವದಿಂದ ನಡೆದುಕೊಂಡಿದ್ದರು ಎಂದು ಹೇಳಿದ್ದಾರೆ.
ವರದಿಯ ಪ್ರಕಾರ ಭಾರತೀಯ ವಿದ್ಯಾರ್ಥಿಗಳು ಫೆ.27ರಂದು ಸೈರಟ್ ಗಡಿಯನ್ನು ದಾಟಿದ್ದರು, ಅವರಿಗೆ ಸ್ನಾಗೊವ್ನ ಎರ್ಮಾನೆಸ್ಟಿ ಗ್ರಾಮದ ಶಾಲೆಯ ಜಿಮ್ನಾಶಿಯಂನಲ್ಲಿ ಅವರಿಗೆ ಆಶ್ರಯವನ್ನು ಒದಗಿಸಲಾಗಿತ್ತು.
‘ಮರುದಿನ ಬಸ್ಸುಗಳು ಬರಲಿವೆ ಎಂಬ ಮಾಹಿತಿಯನ್ನು ಸ್ಥಳೀಯ ಭಾರತೀಯ ಅಧಿಕಾರಿಗಳು ನಮಗೆ ನೀಡಿದ್ದರು. ಸಿಂದಿಯಾರ ಭೇಟಿಯೊಂದಿಗೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ಲಭಿಸುತ್ತದೆ ಎಂದು ನಾನು ಆಶಿಸಿದ್ದೆ ’ ಎಂದು ಆ್ಯಂಗೆಲ್ ತಿಳಿಸಿದರು.
ಸುದ್ದಿಸಂಸ್ಥೆಯು ಮೇಯರ್ ಆತಂಕಗಳ ಕುರಿತು ದೂರವಾಣಿಯಲ್ಲಿ ಸಿಂದಿಯಾರನ್ನು ಪ್ರಶ್ನಿಸಿದಾಗ,‘ವಿದ್ಯಾರ್ಥಿಗಳು ಆಗಷ್ಟೇ ಕಠಿಣ ಪ್ರಯಾಣವನ್ನು ಮುಗಿಸಿ ಹೈರಾಣಾಗಿದ್ದರು. ಕೆಲವು ಆತಂಕಗಳು, ಕೆಲವು ಚಿಂತೆಗಳಿದ್ದವು ನಿಜ ಮತ್ತು ಅವುಗಳನ್ನು ಮೇಯರ್ ವ್ಯಕ್ತಪಡಿಸಿದ್ದರು. ಅದು ಒಳ್ಳೆಯದು. ವಿದ್ಯಾರ್ಥಿಗಳ ಕಳವಳಗಳನ್ನು ನಿವಾರಿಸಲು ನಾನಲ್ಲಿದ್ದೆ. ಭಾರತದ ಪ್ರತಿನಿಧಿಯಾಗಿ ನಾವು ಅದನ್ನು ಅರಗಿಸಿಕೊಳ್ಳಬೇಕಿತ್ತು, ಪರಿಹಾರವೊಂದನ್ನು ಕಂಡು ವಿದಾರ್ಥಿಗಳನ್ನು ಸ್ವದೇಶಕ್ಕೆ ಕಳುಹಿಸಬೇಕಿತ್ತು ’ ಎಂದು ಹೇಳಿದ್ದಾರೆ.
ನೀವು ಸಹನೆಯನ್ನು ಕಳೆದುಕೊಂಡಿದ್ದೇಕೆ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಉತ್ತರಿಸಿದ ಮೇಯರ್, ಹೆಚ್ಚಿನ ಜನರು ಭಾವಿಸಿರುವಂತೆ ನಾನು ಸಿಟ್ಟಾಗಿರಲಿಲ್ಲ. ಆ ಮಕ್ಕಳನ್ನು ನೋಡಿ ನನಗೆ ನೋವಾಗಿತ್ತು, ಹಾಗಾಗಿ ನನ್ನ ಸಹನೆಯನ್ನು ಕಳೆದುಕೊಂಡಿದ್ದೆ. ಅವರು ಗಡಿಯಲ್ಲಿ ಏನೇನು ಕಷ್ಟಗಳನ್ನು ಅನುಭವಿಸಿದ್ದರು ಎನ್ನುವುದು ನನಗೆ ತಿಳಿದಿತ್ತು. ಪಿಆರ್ ಭಾಷಣ ಕೇಳಲು ಅವರನ್ನು ಬಳಸಿಕೊಳ್ಳಬೇಕಿರಲಿಲ್ಲ. ಸಿಂದಿಯಾ ವಾಯುಯಾನ ಸಚಿವರು ಎನ್ನುವುದು ನನಗೆ ಗೊತ್ತಿರಲಿಲ್ಲ, ಗೊತ್ತಿದ್ದರೂ ನಾನು ಅದನ್ನೇ ಮಾಡುತ್ತಿದ್ದೆ. ಅವರ ನಡವಳಿಕೆಯನ್ನು ಖಂಡಿಸುವುದು ನನಗೆ ಅನಿವಾರ್ಯವಾಗಿತ್ತು. ನೀವು ನಮ್ಮ ದೇಶಕ್ಕೆ ಬಂದು, ನಮ್ಮ ಮನೆಗೆ ಬಂದು ನಮ್ಮನ್ನು ಅಗೌರವಿಸುವಂತಿಲ್ಲ ’ ಎಂದು ಹೇಳಿದ್ದಾರೆ.
‘ವಿದ್ಯಾರ್ಥಿಗಳಲ್ಲಿ ಯಾರೋ ನಾನು ನಗರದ ಮೇಯರ್ ಎಂದು ಸಿಂದಿಯಾಗೆ ತಿಳಿಸಿದ್ದರು. ನಮ್ಮನ್ನು ಅಗೌರವಿಸಿದ್ದಕ್ಕಾಗಿ ಅವರು ಕ್ಷಮೆಯನ್ನು ಯಾಚಿಸಿರಲಿಲ್ಲ. ಸಮಯವು ಎಲ್ಲರಿಗೂ, ಭಾರತೀಯ ತೆರವು ಕಾರ್ಯಾಚರಣೆಯ ತಂಡಗಳಿಗೂ ಕಷ್ಟದ್ದಾಗಿತ್ತು ಎನ್ನುವುದು ನನಗೆ ಅರ್ಥವಾಗಿತ್ತು. ಕೊನೆಯಲ್ಲಿ ನಾವು ಪರಸ್ಪರ ಹಸ್ತಲಾಘವ ಮಾಡಿದಾಗ ಅವಸರದಲ್ಲಿದ್ದಂತೆ ಅವರಲ್ಲಿ ಯಾವುದೇ ಭಾವನೆಗಳಿರಲಿಲ್ಲ. ಭಾಷಣ ಮುಗಿಸಿ ಅವರಲ್ಲಿಂದ ತೆರಳಿದರು. ಅದೊಂದು ಅತ್ಯಂತ ಅಹಿತಕರ ವಿನಿಮಯವಾಗಿತ್ತು’ ಎಂದು ಆ್ಯಂಗೆಲ್ ಹೇಳಿದ್ದಾರೆ.
ತಾನು ಭಾರತೀಯ ಸಾಮಾಜಿಕ ಜಾಲ ಬಳಕೆದಾರರಿಂದ ಬೆದರಿಕೆಗಳು ಮತ್ತು ನಿಂದೆಗಳನ್ನು ಸ್ವೀಕರಿಸುತ್ತಿದ್ದೇನೆ ಎಂದ ಮೇಯರ್,‘ಬಹುಶಃ ಪೇಯ್ಡ್ ಟ್ರೋಲ್‌ಗಳಿಂದ ದ್ವೇಷ ಸಂದೇಶಗಳಿಂದ ನನ್ನ ಅಧಿಕೃತ ಪೇಜ್ ತುಂಬಿಹೋಗಿದೆ. ನಾನೋರ್ವ ರಾಜಕಾರಣಿ ಮತ್ತು ನಾನಿದನ್ನು ನಿಭಾಯಿಸಬಲ್ಲೆ. ಆದರೆ ವಿದೇಶಿಯರಿಂದ ದ್ವೇಷ ಸಂದೇಶಗಳನ್ನು ಸ್ವೀಕರಿಸುತ್ತಿರುವುದು ಇದೇ ಮೊದಲು ’ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಅನುಕಂಪ ತೋರಿಸಿದ್ದಕ್ಕಾಗಿ ಇಂತಹ ಬೆದರಿಕೆಗಳನ್ನು ತಾನು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ ಸ್ನಾಗೊವ್ನಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿಗಳು ತಮ್ಮ ಕಷ್ಟಕಾಲದಲ್ಲಿ ನೆರವಾಗಿದ್ದಕ್ಕಾಗಿ ಆ್ಯಂಗೆಲ್ಗೆ ಕೃತಜ್ಞತೆಯ ಸಂದೇಶಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ರೊಮೇನಿಯಾದ ಸ್ನಾಗೊವ್ ನಗರದ ಮೇಯರ್ ಮಿಹಾಯ್ ಆ್ಯಂಗೆಲ್ ಅವರೊಂದಿಗೆ ವಾಗ್ಯುದ್ಧದಲ್ಲಿ ತೊಡಗಿದ್ದ ವೀಡಿಯೊ ವೈರಲ್ ಆಗಿತ್ತು.
ರಷ್ಯ-ಉಕ್ರೇನ್ ಯುದ್ಧದಿಂದಾಗಿ ಅತಂತ್ರರಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಲು ರೊಮೇನಿಯಾದಲ್ಲಿರುವ ಸಿಂದಿಯಾ ಮಾತನಾಡುತ್ತಿರುವಾಗ ಅವರನ್ನು ತಡೆದ ಆ್ಯಂಗೆಲ್,‘ಅವರು ಮನೆಗೆ ಯಾವಾಗ ಮರಳುತ್ತಾರೆ ಎನ್ನುವುದನ್ನು ಅವರಿಗೆ (ವಿದ್ಯಾರ್ಥಿಗಳಿಗೆ) ವಿವರಿಸಿ. ಅವರಿಗೆ ಆಶ್ರಯ,ಆಹಾರ ಮತ್ತು ನೆರವನ್ನು ಒದಗಿಸಿದ್ದು ನಾನು, ನೀವಲ್ಲʼ ಎಂದು ಹೇಳುತ್ತಿರುವುದನ್ನು ವೀಡಿಯೊ ತೋರಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಂದಿಯಾ‘ನಾನು ಅವರಿಗೇನು ಹೇಳಬೇಕೋ ಅದನ್ನು ಹೇಳಲು ಬಿಡಿʼಎಂದು ಉಡಾಫೆಯಿಂದ ಹೇಳಿದ್ದರು.
ವೀಡಿಯೊದ ಅಂತ್ಯದಲ್ಲಿ ಮೇಯರ್ ಪ್ರತಿಕ್ರಿಯೆಗೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಬೆಂಬಲಿಸುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ. ಈ ವಿಡಿಯೋ ಟ್ವಿಟರಿನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಸಿಂಧಿಯಾ ಹಾಗೂ ಕೇಂದ್ರ ಸರ್ಕಾರ ದುರಂತಗಳನ್ನೂ ತಮ್ಮ ಪ್ರಚಾರದ ಅವಕಾಶಗಳನ್ನಾಗಿ ಬಳಸುತ್ತಿದೆ ಎಂದು ವಿಮರ್ಷೆಗಳು ಕೇಳಿ ಬಂದಿದ್ದವು.
ಕೃಪೆ: Thewire.in
जब रोमानिया के मेयर को सिंधिया जी को याद दिलाना पड़ा कि बच्चों के खाने और रहने का बंदोबस्त हमने किया है आपने नहीं...
— Srinivas BV (@srinivasiyc) March 3, 2022
आप अपनी बात कीजिए !!! pic.twitter.com/VeSskV9yw1







