ಪುಟಿನ್ ಜೊತೆ ಮೋದಿ ಮಾತುಕತೆ: ಸುಮಿಯಲ್ಲಿಯ ಭಾರತೀಯರ ಶೀಘ್ರ ಸುರಕ್ಷಿತ ತೆರವಿಗಾಗಿ ಕೋರಿಕೆ

ಹೊಸದಿಲ್ಲಿ,ಮಾ.7: ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿ ಉಕ್ರೇನ್‌ನ ಸುಮಿ ನಗರದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಗಾಢ ಕಳವಳವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಶೀಘ್ರ ತೆರವಿಗಾಗಿ ಮೋದಿ ಪುಟಿನ್ ಅವರನ್ನು ಕೋರಿಕೊಂಡರು.
50 ನಿಮಿಷಗಳ ದೂರವಾಣಿ ಸಂಭಾಷಣೆಗಳ ಸಂದರ್ಭ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆಂಸ್ಕಿ ಅವರ ನಡುವೆ ನೇರ ಮಾತುಕತೆಯು ಹಾಲಿ ನಡೆಯುತ್ತಿರುವ ಶಾಂತಿ ಪ್ರಯತ್ನಗಳಿಗೆ ಹೆಚ್ಚು ಪೂರಕವಾಗಬಹುದು ಎಂದು ಸಲಹೆಯನ್ನೂ ಮೋದಿ ನೀಡಿದರು.
ಸಾಧ್ಯವಾದಷ್ಟು ಶೀಘ್ರ ಸುಮಿಯಲ್ಲಿನ ಭಾರತೀಯ ಪ್ರಜೆಗಳ ಸುರಕ್ಷಿತ ಸ್ಥಳಾಂತರದ ಮಹತ್ವಕ್ಕೆ ಮೋದಿ ಹೆಚ್ಚು ಒತ್ತು ನೀಡಿದ್ದು,ಅವರನ್ನು ನಗರದಿಂದ ಸುರಕ್ಷಿತವಾಗಿ ಹೊರತೆಗೆಯಲು ಸಾಧ್ಯವಿರುವ ಎಲ್ಲ ಸಹಕಾರದ ಭರವಸೆಯನ್ನು ಪುಟಿನ್ ಮೋದಿಯವರಿಗೆ ನೀಡಿದರು ಎಂದು ಅಧಿಕೃತ ಮೂಲಗಳು ತಿಳಿಸಿದವು.
ರಷ್ಯ ಮತ್ತು ಉಕ್ರೇನ್ ಪಡೆಗಳ ಘನಘೋರ ಕಾಳಗದ ನಡುವೆ ಸುಮಿ ನಗರದಲ್ಲಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರ ಸ್ಥಳಾಂತರಕ್ಕಾಗಿ ಮಾನವೀಯ ಕಾರಿಡಾರ್‌ಗಳನ್ನು ಒದಗಿಸಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪುಟಿನ್ ಪ್ರಧಾನಿಯವರಿಗೆ ವಿವರಿಸಿದರು ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.
11 ದಿನಗಳ ಹಿಂದೆ ಉಕ್ರೇನ್‌ನಲ್ಲಿ ಮಿಲಿಟರಿ ಸಂಘರ್ಷ ಆರಂಭಗೊಂಡ ಬಳಿಕ ಇದು ಉಭಯ ನಾಯಕರ ನಡುವಿನ ಮೂರನೇ ದೂರವಾಣಿ ಮಾತುಕತೆಯಾಗಿದೆ.
ಇದಕ್ಕೂ ಮುನ್ನ ರಷ್ಯದ ಅಧಿಕಾರಿಗಳು,ಸೋಮವಾರ ಕದನ ವಿರಾಮವನ್ನು ಜಾರಿಗೆ ತರುವುದಾಗಿ ಮತ್ತು ಕೀವ್,ಖಾರ್ಕಿವ್ ಮತ್ತು ಸುಮಿ ಸೇರಿದಂತೆ ಉಕ್ರೇನ್‌ನ ಪ್ರಮುಖ ನಗರಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ತೆರೆಯುವುದಾಗಿ ತಿಳಿಸಿದ್ದರು.
ಉಭಯ ನಾಯಕರು ಉಕ್ರೇನ್‌ನಲ್ಲಿ ಉದ್ಭವಿಸಿರುವ ಸ್ಥಿತಿಯ ಬಗ್ಗೆ ಚರ್ಚಿಸಿದರು ಮತ್ತು ಉಕ್ರೇನ್ ಹಾಗೂ ರಷ್ಯ ತಂಡಗಳ ನಡುವಿನ ಮಾತುಕತೆಗಳ ಸ್ಥಿತಿಗತಿಯ ಕುರಿತು ಪುಟಿನ್ ಮೋದಿಯವರಿಗೆ ವಿವರಿಸಿದರು. ಮಾತುಕತೆಗಳನ್ನು ಸ್ವಾಗತಿಸಿದ ಮೋದಿ,ಅವು ಸಂಘರ್ಷವನ್ನು ಅಂತ್ಯಗೊಳಿಸಲಿವೆ ಎಂದು ಆಶಯವನ್ನು ವ್ಯಕ್ತಪಡಿಸಿದರು ಎಂದು ಹೇಳಿಕೆಯು ತಿಳಿಸಿದೆ.
ಕದನ ವಿರಾಮ ಮತ್ತು ಸುಮಿ ಸೇರಿದಂತೆ ಉಕ್ರೇನ್‌ನ ಭಾಗಗಳಲ್ಲಿ ಮಾನವೀಯ ಕಾರಿಡಾರ್‌ಗಳ ಸ್ಥಾಪನೆಯ ಪ್ರಕಟಣೆಯನ್ನು ಮೋದಿ ಪ್ರಶಂಸಿಸಿದರು ಎಂದು ಮೂಲಗಳು ತಿಳಿಸಿದವು.
ಇದಕ್ಕೂ ಮುನ್ನ ಬೆಳಿಗ್ಗೆ ಉಕ್ರೇನ್ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮೋದಿ,ಸುಮಿ ನಗರದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ಸ್ಥಳಾಂತರಕ್ಕೆ ಅವರ ನಿರಂತರ ಬೆಂಬಲವನ್ನು ಕೋರಿದರು. ಮಾತುಕತೆಗಳ ಸಂದರ್ಭ ಸಂಘರ್ಷ ಸ್ಥಿತಿ ಮತ್ತು ಉಕ್ರೇನ್ ಹಾಗೂ ರಷ್ಯ ನಡುವೆ ನಡೆಯುತ್ತಿರುವ ಮಾತುಕತೆಗಳ ಕುರಿತು ಝೆಲೆಂಸ್ಕಿ ಮೋದಿಯವರಿಗೆ ವಿವರಿಸಿದರು.
ಭಾರತವು ಕಳೆದ ಕೆಲವು ದಿನಗಳಿಂದ ಸುಮಿಯಲ್ಲಿಯ ತನ್ನ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆಗೆ ಹೆಚ್ಚಿನ ಗಮನವನ್ನು ಹರಿಸಿದೆ ಎಂದು ಮೂಲಗಳು ತಿಳಿಸಿದವು.
ಶನಿವಾರ ಬೆಳಿಗ್ಗೆ ಭಾರತೀಯ ವಿದ್ಯಾರ್ಥಿಗಳು ಸುಮಿಯಿಂದ ರಷ್ಯದ ಗಡಿಗೆ ತೆರಳಲು ತಾವು ನಿರ್ಧರಿಸಿದ್ದೇವೆ ಮತ್ತು ತಮಗೇನಾದರೂ ಸಂಭವಿಸಿದರೆ ಭಾರತ ಸರಕಾರ ಮತ್ತು ಉಕ್ರೇನ್‌ನಲ್ಲಿಯ ರಾಯಭಾರ ಕಚೇರಿ ಅದಕ್ಕೆ ಹೊಣೆಯಾಗುತ್ತವೆ ಎಂಬ ವೀಡಿಯೊ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಜೀವಗಳನ್ನು ಅಪಾಯದಲ್ಲಿ ಸಿಲುಕಿಸದಂತೆ ಅವರನ್ನು ಕೋರಿಕೊಂಡಿದ್ದ ಭಾರತೀಯ ರಾಯಭಾರ ಕಚೇರಿಯು,ಅವರನ್ನು ಸುರಕ್ಷಿತವಾಗಿ ತೆರವುಗೊಳಿಸಲು ಎಲ್ಲ ಪ್ರಯತ್ನಗಳನ್ನೂ ತಾನು ಮಾಡುವುದಾಗಿ ತಿಳಿಸಿತ್ತು. ಈ ಭರವಸೆ ವಿದ್ಯಾರ್ಥಿಗಳಿಗೆ ಕೊಂಚ ನೆಮ್ಮದಿಯನ್ನು ಮೂಡಿಸಿತ್ತು.
ಸುಮಿಯಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನು ಪೊಲ್ಟಾವಾ ಮೂಲಕ ಉಕ್ರೇನ್‌ನ ಪಶ್ಚಿಮ ಗಡಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲು ಪೊಲ್ಟಾವಾ ನಗರದಲ್ಲಿ ತಂಡವೊಂದನ್ನು ನಿಯೋಜಿಸಿರುವುದಾಗಿ ಭಾರತೀಯ ರಾಯಭಾರ ಕಚೇರಿಯು ರವಿವಾರ ತಿಳಿಸಿತ್ತು.







