ಚಿಕ್ಕಮಗಳೂರು: ಆನ್‍ಲೈನ್ ಶಿಕ್ಷಣಕ್ಕೆ ಆಗ್ರಹಿಸಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಂದ ಜಿಲ್ಲಾಧಿಕಾರಿಗೆ ಮನವಿ

ಚಿಕ್ಕಮಗಳೂರು, ಮಾ.7: ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಕಾಲೇಜು ಆಡಳಿತ ಮಂಡಳಿ ನಿರಾಕರಿಸುತ್ತಿದ್ದು, ಕಾಲೇಜು ಪ್ರವೇಶಕ್ಕೂ ಅನುಮತಿ ನೀಡದೇ, ಆನ್‍ಲೈನ್ ಶಿಕ್ಷಣವನ್ನೂ ನೀಡದೇ ನಮ್ಮನ್ನು ಶಿಕ್ಷಣದಿಂದ ವಂಚಿತರನ್ನಾಗಿಸಲಾಗುತ್ತಿದೆ. ಆದ್ದರಿಂದ ಕೂಡಲೇ ಆನ್‍ಲೈನ್ ತರಗತಿಗಳನ್ನು ನಡೆಸಬೇಕು ಹಾಗೂ ಆಂತರಿಕ ಮೌಲ್ಯಮಾಪನ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಐಡಿಎಸ್‍ಜಿ ಕಾಲೇಜಿನ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸರಕಾರಗಳು ಅನೇಕು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಶ್ರಮಿಸುತ್ತಿದೆ. ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನವನ್ನೂ ಸರಕಾರ ವಿನಿಯೋಗಿಸಲಾಗುತ್ತಿದೆ. ಆದರೆ ಶಾಲಾ ಕಾಲೇಜುಗಳಿಗೆ ಸ್ಕಾರ್ಫ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶಿಸಲು ನಿರ್ಬಂಧ ವಿಧಿಸಲಾಗುತ್ತಿದೆ. ಈ ಮೂಲಕ ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯದದ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ಉದ್ದೇಶಪೂರ್ವಕವಾಗಿ ವಂಚಿಸಲಾಗುತ್ತಿದೆ ಎಂದು ದೂರಿದರು.
ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಸಮವಸ್ತ್ರದ ವೇಲನ್ನೇ ಶಿರವಸ್ತ್ರವನ್ನಾಗಿ ಹಾಕಿಕೊಂಡು ಬಂದರೆ ಕಾಲೇಜಿನಿಂದ ಹೊರಗೆ ಕಳಿಸಲಾಗುತ್ತಿದೆ. ಕಳೆದ ಸುಮಾರು 2 ತಿಂಗಳುಗಳಿಂದ ಕಾಲೇಜಿನಲ್ಲಿ ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಆಂತರಿಕ ಮೌಲ್ಯಮಾಪನ ಪರೀಕ್ಷೆ ನಡೆಯುತ್ತಿದ್ದು, ನಮ್ಮನ್ನು ತರಗತಿಯಿಂದ ಹೊರಗಿಡುತ್ತಿರುವುದರಿಂದ ಪಠ್ಯ ಮತ್ತು ಆಂತರಿಕ ಪರೀಕ್ಷೆಯಿಂದ ವಂಚಿತರಾಗುತ್ತಿದ್ದೇವೆ ಎಂದು ದೂಷಿಸಿದರು.
ಹಿಜಾಬ್ ವಿವಾದ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದಿಂದ ಅಂತಿಮ ತೀರ್ಪು ಬರುವವರೆಗೂ ನಮಗೆ ಆನ್‍ಲೈನ್ ತರಗತಿಗಳನ್ನು ನಡೆಸಬೇಕು ಮತ್ತು ಆಂತರಿಕ ಮೌಲ್ಯ ಮಾಪನ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕು ಕಣ್ಣೀರಿಡುತ್ತಾ ವಿದ್ಯಾರ್ಥಿನಿಯರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಐಡಿಎಸ್‍ಜಿ ಕಾಲೇಜಿನ 15ಕ್ಕೂ ಹೆಚ್ಚು ಸ್ಕಾರ್ಫ್‍ಧಾರಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.







