ರಶ್ಯದ 11,000 ಯೋಧರನ್ನು ಹತ್ಯೆ ಮಾಡಲಾಗಿದೆ: ಉಕ್ರೇನ್
ಅಂತರಾಷ್ಟ್ರೀಯ ನ್ಯಾಯಾಲಯದ ವಿಚಾರಣೆಗೆ ರಶ್ಯಾ ಗೈರು

ಸಾಂದರ್ಭಿಕ ಚಿತ್ರ
ಕೀವ್, ಮಾ.7: ಉಕ್ರೇನ್ ಮೇಲೆ ರಶ್ಯಾ ಪಡೆಯ ಆಕ್ರಮಣ ಆರಂಭವಾದಂದಿನಿಂದ ಇದುವರೆಗೆ(ಮಾ.7ರವರೆಗೆ) ರಶ್ಯದ ಒಟ್ಟು 11,000 ಯೋಧರು ಹತರಾಗಿದ್ದಾರೆ ಎಂದು ಉಕ್ರೇನ್ನ ವಿದೇಶ ವ್ಯವಹಾರ ಸಚಿವಾಲಯ ಸೋಮವಾರ ಹೇಳಿದೆ.
ರಶ್ಯಕ್ಕೆ ಸೇರಿದ ವಿವಿಧ ರೀತಿಯ 999 ಶಸ್ತ್ರಸಜ್ಜಿತ ವಾಹನಗಳು, 46 ಯುದ್ಧವಿಮಾನ, 68 ಹೆಲಿಕಾಪ್ಟರ್ಗಳು, 290 ಟ್ಯಾಂಕ್ಗಳು, 117 ಫಿರಂಗಿಗಳು ಮತ್ತು 50 ರಾಕೆಟ್ ಉಡಾವಣಾ ವ್ಯವಸ್ಥೆ, 454 ಸೇನಾವಾಹನಗಳು, 3 ಯುದ್ಧನೌಕೆ, 7 ಮಾನವರಹಿತ ವೈಮಾನಿಕ ವಾಹನ, 23 ವಿಮಾನ ವಿರೋಧಿ ಯುದ್ಧವ್ಯವಸ್ಥೆಗೆ ಹಾನಿಯಾಗಿದೆ. ಎಂದು ಸಚಿವಾಲಯ ಹೇಳಿದೆ.
ಉಕ್ರೇನ್ ಮೇಲೆ ಫೆಬ್ರವರಿ 24ರಂದು ರಶ್ಯನ್ ಸೇನೆ ದಾಳಿ ಮಾಡಿತ್ತು. ಉಕ್ರೇನ್ ದೇಶವನ್ನು ನಿರಸ್ತ್ರೀಕರಣಗೊಳಿಸುವುದು ಮತ್ತು ನಾಝಿಗಳಿಂದ ಮುಕ್ತಗೊಳಿಸುವುದಕ್ಕೆ ಈ ವಿಶೇಷ ಸೇನಾ ಕಾರ್ಯಾಚರಣೆ ನಡೆಸಿರುವುದಾಗಿ ರಶ್ಯ ಸಮರ್ಥಿಸಿಕೊಂಡಿತ್ತು.
ಅಂತರಾಷ್ಟ್ರೀಯ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾದ ರಶ್ಯ
ಉಕ್ರೇನ್ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಸೋಮವಾರ ಆರಂಭವಾದ ವಿಚಾರಣೆಗೆ ರಶ್ಯ ಗೈರುಹಾಜರಾಗಿದೆ.
ಸಭೆಯಲ್ಲಿ ಪಾಲ್ಗೊಂಡ ಉಕ್ರೇನ್ ಪ್ರತಿನಿಧಿ ಆ್ಯಂಟನ್ ಕೊರಿನೆವಿಚ್, ಉಕ್ರೇನ್ ಮೇಲೆ ನಡೆಸಿರುವ ವಿನಾಶಕಾರಿ ಆಕ್ರಮಣವನ್ನು ನಿಲ್ಲಿಸುವಂತೆ ರಶ್ಯಕ್ಕೆ ಆದೇಶಿಸಬೇಕು. ಆಕ್ರಮಣ ನಿಲ್ಲಿಸುವಲ್ಲಿ ನ್ಯಾಯಾಲಯ ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ ಎಂದರು.
ರಶ್ಯದ ಆಕ್ರಮಣ ಯುದ್ಧಾಪರಾಧವಾಗಿದ್ದು ಅದನ್ನು ನಿಲ್ಲಿಸುವಂತೆ ಆ ದೇಶಕ್ಕೆ ಆದೇಶಿಸಬೇಕೆಂದು ಕೋರಿ ಉಕ್ರೇನ್ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಸೋಮವಾರ ಆರಂಭವಾದ ವಿಚಾರಣೆ ಸಂದರ್ಭ ರಶ್ಯದ ಪ್ರತಿನಿಧಿಗಳಿಗೆ ಮೀಸಲಾಗಿದ್ದ ಆಸನ ಕಾಲಿಯಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಪುಟಿನ್ ವಿರುದ್ಧ ಒಕ್ಕೂಟ ಸ್ಥಾಪನೆ: ವಿಶ್ವ ಮುಖಂಡರಿಗೆ ಬ್ರಿಟನ್ ಪ್ರಧಾನಿ ಆಹ್ವಾನ
ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣದ ದೌರ್ಜನ್ಯದ ವಿರುದ್ಧ ಜಾಗತಿಕ ಮಟ್ಟದಲ್ಲಿ ಅಭಿಪ್ರಾಯ ಮೂಡಿಸಲು ವಿಶ್ವಮುಖಂಡರನ್ನು ಒಗ್ಗೂಡಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಸೋಮವಾರ ಪ್ರಧಾನಿಯವರ ಕಾರ್ಯಾಲಯದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡೊ ಮತ್ತು ಹಾಲಂಡಿನ ಪ್ರಧಾನಿ ಮಾರ್ಕ್ ರೂಟ್ ಜತೆ ಸಭೆ ನಡೆಸಿದ ಬಳಿಕ ಸುದ್ಧಿಗೋಷ್ಟಿಯಲ್ಲಿ ಜಾನ್ಸನ್ ಈ ಮಾಹಿತಿ ನೀಡಿದ್ದಾರೆ. ಈ ಸಭೆಯು ಪುಟಿನ್ ವಿರುದ್ಧದ ಜಾಗತಿಕ ಒಕ್ಕೂಟ ಸ್ಥಾಪನೆ ಕಾರ್ಯಕ್ಕೆ ನಾಂದಿ ಹಾಡಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ಮೂವರು ಪ್ರಧಾನಿಗಳು ಮತ್ತೊಮ್ಮೆ ಸಭೆ ನಡೆಸಿ, ರಶ್ಯದ ಆಕ್ರಮಣವನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
ಉಕ್ರೇನ್ಗೆ ಅಗತ್ಯವಿರುವ ಔಷಧ ಸಾಮಾಗ್ರಿ ಹಾಗೂ ಇತರ ಅಗತ್ಯದ ವಸ್ತುಗಳನ್ನು ಬ್ರಿಟನ್ ತಲುಪಿಸಿದೆ. ಇದೀಗ ಹೆಚ್ಚುವರಿಯಾಗಿ 100 ಮಿಲಿಯನ್ ಡಾಲರ್ ಮೊತ್ತವನ್ನು ನೇರವಾಗಿ ಉಕ್ರೇನ್ ಸರಕಾರಕ್ಕೆ ವರ್ಗಾಯಿಸಲಾಗುವುದು. ರಶ್ಯದ ಅಪ್ರಚೋದಿತ ಮತ್ತು ಅಕ್ರಮ ಆಕ್ರಮವಣದಿಂದ ಉಂಟಾಗಿರುವ ಆರ್ಥಿಕ ಒತ್ತಡವನ್ನು ನಿಭಾಯಿಸಲು ಇದು ನೆರವಾಗಲಿದೆ . ಸರಕಾರಿ ಸಿಬಂದಿಗಳ ವೇತನ ಪಾವತಿ, ಸರಕಾರಿ ಇಲಾಖೆಗಳ ಕಾರ್ಯನಿರ್ವಹಣೆಗೆ, ನಿವೃತ್ತ ನೌಕರರ ಪಿಂಚಣಿ ಪಾವತಿಗೆ ಈ ನಿಧಿಯನ್ನು ಬಳಸಲಾಗುವುದು. ಉಕ್ರೇನ್ ಸರಕಾರಕ್ಕೆ ನೆರವಾಗಲು ಕಳೆದ ವಾರ ಸ್ಥಾಪಿಸಲಾದ ವಿಶ್ವಬ್ಯಾಂಕ್ ಮಲ್ಟಿಡೋನರ್ ಟ್ರಸ್ಟ್ ಫಂಡ್ ಮೂಲಕ ಈ ನೆರವನ್ನು ಒದಗಿಸಲಾಗುವುದು.
22,000 ಯೋಧರಿಗೆ ಬ್ರಿಟನ್ ತರಬೇತಿ ನೀಡುತ್ತಿರುವ ಜತೆಗೆ, 2000 ಟ್ಯಾಂಕ್ ವಿರೋಧಿ ಕ್ಷಿಪಣಿ ಒದಗಿಸಲಾಗುವುದು. ಆರ್ಥಿಕ ಸುಧಾರಣೆ ಮತ್ತು ಇಂಧನ ಸ್ವಾವಲಂಬನೆಗೆ 100 ಮಿಲಿಯ ಪೌಂಡ್, ಮಾನವೀಯ ನೆರವು ಒದಗಿಸಲು 120 ಮಿಲಿಯ ಪೌಂಡ್ ಒದಗಿಸಲಾಗುವುದು ಎಂದು ಜಾನ್ಸನ್ ಹೇಳಿದ್ದಾರೆ.
ಈ ಮಧ್ಯೆ, ಬ್ರಿಟನ್ನಲ್ಲಿ ರಶ್ಯಾ ಸರಕಾರಕ್ಕೆ ಆಪ್ತವಾಗಿರುವ ಪ್ರಭಾವೀ ವ್ಯಕ್ತಿಗಳ ಆಸ್ತಿಯನ್ನು ಸ್ಥಂಭನಗೊಳಿಸುವ ಕ್ರಮಗಳನ್ನು ನಿಕಟವಾಗಿ ಗಮನಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆರ್ಥಿಕ ಅಪರಾಧ(ಪಾರದರ್ಶಕತೆ ಮತ್ತು ಅನುಷ್ಟಾನ) ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಸೋಮವಾರ ಬ್ರಿಟನ್ ಸಂಸತ್ತಿನಲ್ಲಿ ಮತಕ್ಕೆ ಹಾಕಲಾಗುವುದು. ಪುಟಿನ್ ಹಾಗೂ ಅವರ ಆಡಳಿತದ ವಿರುದ್ಧ ಇನ್ನಷ್ಟು ಕಠಿಣ ನಿರ್ಬಂಧ ಜಾರಿಗೆ ಈ ತಿದ್ದುಪಡಿ ಅವಕಾಶ ಮಾಡಿಕೊಡಲಿದೆ ಎಂದು ಬ್ರಿಟನ್ ನ ವಿದೇಶ ವ್ಯವಹಾರ ಇಲಾಖೆ ಕಾರ್ಯದರ್ಶಿ ಲಿರ್ ಟ್ರೂಸ್ ಹೇಳಿದ್ದಾರೆ.







