ಕಳಸ: ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಆಗ್ರಹಿಸಿ ಸಿಪಿಐ ಅಹೋರಾತ್ರಿ ಧರಣಿ

ಕಳಸ, ಮಾ.7: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡುವ ಮೂಲಕ ಇಲ್ಲಿನ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಷ್ಟ್ ಪಕ್ಷದ ಮುಖಂಡರು, ಕಾರ್ಯಕರ್ತರು ಸೋಮವಾರ ಆಸ್ಪತ್ರೆ ಎದುರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಕಳಸ ತಾಲೂಕು ಸಿಪಿಐ ಪಕ್ಷದ ಮುಖಂಡರಾದ ಗೋಪಾಲ್ ಶೆಟ್ಟಿ ಹಾಗೂ ಲಕ್ಷ್ಮಣ್ ಆಚಾರ್ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಆಸ್ಪತ್ರೆಗೆ ತಜ್ಞ ವೈದ್ಯರು, ಸಿಬ್ಬಂದಿಯನ್ನು ನೇಮಕ ಮಾಡದೇ ನಿರ್ಲಕ್ಷ್ಯವಹಿಸಿರುವ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಿಪಿಐ ಮುಖಂಡ ಲಕ್ಷ್ಮಣ್ ಆಚಾರ್, ಕಳಸ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿಯ ಕೊರತೆಯಿಂದಾಗಿ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಡಜನತೆ, ಕೂಲಿಕಾರ್ಮಿಕರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗುತ್ತಿಲ್ಲ. ವೈದ್ಯರ ಕೊರತೆಯಿಂದಾಗಿ ಬಡಜನತೆ ಉಡುಪಿ, ಮಂಗಳೂರು ನಗರದಂತಹ ದೂರದ ನಗರಗಳಿಗೆ ಹೋಗಿ ದುಬಾರಿ ಬೆಲೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಗೆ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ, ಆರೋಗ್ಯ ಇಲಾಖೆಯೇ ಕಾರಣ. ಇಲ್ಲಿನ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಿಬ್ಬಂದಿ ಸೇರಿ 47 ಮಂದಿ ಕೆಲಸ ಮಾಡಬೇಕಿದ್ದು, ಸದ್ಯ ಕೇವಲ 12 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರು, ಸಿಬ್ಬಂದಿ ನೇಮಕಕ್ಕೆ ಕ್ರಮವಹಿಸದ ಪರಿಣಾಮ ಇಲ್ಲಿನ ಜನರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗದಂತಾಗಿದೆ ಎಂದು ಆರೋಪಿಸಿದರು.
ಕಳಸ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ಹುನ್ನಾರದಿಂದಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸಲು ತಾಲೂಕು ವೈದ್ಯಾಧಿಕಾರಿ ಕ್ರಮವಹಿಸುತ್ತಿಲ್ಲ ಎಂಬ ಆರೋಪ ಇದ್ದು, ಸದ್ಯ ಗೋಣಿಬೀಡು ಆಸ್ಪತ್ರೆಯ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಆದರೆ ಈ ವೈದ್ಯರು ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡುತ್ತಿದ್ದು, ಯಾವಾಗ ಬರುತ್ತಾರೆ, ಯಾವಾಗ ಹೋಗುತ್ತಾರೆಂಬುದೇ ತಿಳಿಯುತ್ತಿಲ್ಲ. ಪರಿಣಾಮ ಈ ಭಾಗದಲ್ಲಿರುವ ಎಸ್ಸಿ, ಎಸ್ಟಿ ಸಮುದಾದ ಕಾರ್ಮಿಕರ ಸಮುದಾಯದ ಜನರು ಆಸ್ಪತ್ರೆಗೆ ಬಂದು ವೈದ್ಯರಿಲ್ಲದೇ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ಖಾಸಗಿ ಆಸ್ಪತ್ರೆಗಳಿಗೆ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣಾಗಿದೆ. ಬಡವರ್ಗದ ಗರ್ಭೀಣಿ ಮಹಿಳೆಯರು, ವೃದ್ಧರು ಅಸ್ಪತ್ರೆ ಅವ್ಯವಸ್ಥೆಯಿಂದಾಗಿ ನರಕಯಾತನೆ ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಕೂಡಲೇ ಕಳಸ ಪಟ್ಟಣದ ಆಸ್ಪತ್ರೆಗೆ ಅಗತ್ಯ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಕಕ್ಕೆ ಕ್ರಮವಹಿಸಬೇಕು. ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಮತ್ತೋರ್ವ ಮುಖಂಡ ಗೋಪಾಲ್ ಶೆಟ್ಟಿ ಮಾತನಾಡಿ, ಕಳಸ ತಾಲೂಕು ಕೇಂದ್ರವಾಗಿ ಇತ್ತೀಚೆಗೆ ಘೊಷಣೆಯಾಗಿದ್ದರೂ ತಾಲೂಕು ಕೇಂದ್ರದ ಆಸ್ಪತ್ರೆ ಸೌಲಭ್ಯಗಳಿಲ್ಲದೇ ನರಳುತ್ತಿರುವುದಕ್ಕೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಬೇಜವಬ್ದಾರಿಯೇ ಕಾರಣ. 2005-06ರಲ್ಲಿ ಕಳಸ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜನರ ಹೋರಾಟದ ಫಲವಾಗಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಆದರೆ ಆಸ್ಪತ್ರೆ ಸುಸಜ್ಜಿತವಾಗಿದ್ದರೂ ವೈದ್ಯರು, ಸಿಬ್ಬಂದಿ ಅಂದಿನಿಂದಲೂ ಕಾಡುತ್ತಿದೆ. ಪರಿಣಾಮ ಕಳಸ ಭಾಗದಲ್ಲಿರುವ ಎಸ್ಸಿ, ಎಸ್ಟಿ ಸಮುದಾಯದ ಬಡ ಜನತೆ, ಎಸ್ಟೇಟ್‍ಗಳ ಕೂಲಿ ಕಾರ್ಮಿಕರಿಗೆ ಆರೋಗ್ಯ ಸೇವೆ ಮರಿಚೀಕೆಯಾಗಿದ್ದು, ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯಿಂದಾಗಿ ಜನರು ಖಾಸಗಿ ಆಸ್ಪತ್ರೆಗಳಿಗೆ ಹಣ ಸುರಿಯುವಂತಾಗಿದೆ ಎಂದ ಅವರು, ಕಳಸ ಪಟ್ಟಣದ ನಿವಾಸಿಯಾಗಿದ್ದ ಡಾ.ಮಾನಸ ಅವರು ಈ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ವೇಳೆ ಆಸ್ಪತ್ರೆಯಲ್ಲಿ ಜನರಿಗೆ ಉತ್ತಮ ಸೇವೆ ಸಿಗುತ್ತಿತ್ತು. ಅವರ ಸೇವೆಯಿಂದಾಗಿ ಬಡಜನರಿಗೆ ಉತ್ತಮ ಸೇವೆ ಸಿಗುತ್ತಿತ್ತು. ಜಿಲ್ಲಾಡಳಿತ ಡಾ.ಮಾನಸ ಅವರನ್ನೇ ಕಳಸ ಪಟ್ಟಣದ ಆಸ್ಪತ್ರೆಗೆ ಮತ್ತೆನೇಮಕ ಮಾಡಬೇಕು. ಅಲ್ಲದೇ ಅಗತ್ಯ ವೈದ್ಯರು, ಸಿಬ್ಬಂದಿಯನ್ನೂ ಕೂಡಲೇ ನೇಮಕ ಮಾಡಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಆಸ್ಪತ್ರೆ ಆವರಣದಲ್ಲಿ ಆಹೋ ರಾತ್ರಿ ಧರಣಿ ಮುಂದುವರಿದಿದ್ದು, ಮಂಗಳವಾರವೂ ಧರಣಿಯನ್ನು ಮುಂದುವರಿಸಲು ಪಕ್ಷದ ಮುಖಂಡರು ನಿರ್ಣಯಿಸಿದ್ದಾರೆ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಧರಣಿಯಲ್ಲಿ ಭಾಗವಹಿಸಿದ್ದರು.







