ಸರಕಾರಿ ಭೂಮಿಯನ್ನು ಲಪಟಾಯಿಸುವವರನ್ನು ಮಟ್ಟ ಹಾಕುತ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ.7: ಸರಕಾರಿ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾಸಗಿ ವ್ಯಕ್ತಿಯ ಹೆಸರುಗಳಿಗೆ ದಾಖಲೆ ಮಾಡಿಕೊಡುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಸೋಮವಾರ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ ನಿಯಮ 69ರ ಮೇರೆಗೆ ‘ಬೆಂಗಳೂರು ನಗರ ಜಿಲ್ಲೆ ಬೇಗೂರು ಹೋಬಳಿ ಹುಳಿಮಾವು ಗ್ರಾಮದಲ್ಲಿ ಸರಕಾರಿ ಭೂಮಿಯ ಹಕ್ಕು ದಾಖಲೆಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಯ ಹೆಸರುಗಳಿಗೆ ದಾಖಲೆ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ’ ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ಜರೂರು ವಿಷಯಕ್ಕೆ ಅವರು ಉತ್ತರಿಸಿದರು.
ಭೂಗಳ್ಳರನ್ನು ಮಟ್ಟ ಹಾಕಬೇಕೆಂದು ಯಡಿಯೂರಪ್ಪ ಸಿಎಂ ಆದ ಮೇಲೆ ಸದನ ಸಮಿತಿ ರಚನೆ ಮಾಡಿದರು. ಎ.ಟಿ.ರಾಮಸ್ವಾಮಿ ಸರ್ವೆ ಮಾಡಿ ವರದಿ ನೀಡಿದ್ದರು. ಭೂಮಿ ಬೆಲೆ ಹೆಚ್ಚಾದಂತೆ ಭೂಗಳ್ಳರೂ ಹೆಚ್ಚಾಗಿದ್ದಾರೆ. ನಖಲಿ ದಾಖಲೆ ಸೃಷ್ಟಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ನಕಲಿ ದಾಖಲೆ ಸೃಷ್ಟಿ ಮಾಡಿದಾಗ, ಅದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗುತ್ತಾರೆ. ಅಧಿಕಾರಿಗಳು ಸರಿ ಇದ್ದಾರೆ ಎಂದು ನಾವು ನಂಬಿರುತ್ತೇವೆ. ಆದರೆ, ಅವರೆ, ಈ ಬಗ್ಗೆ ದಾಖಲೆ ಇಲ್ಲ ಎಂದು ಕೋರ್ಟಿಗೆ ಹೇಳ್ತಾರೆ. ಬಳಿಕ ಆ ನಕಲಿ ದಾಖಲೆ ಸರಿ ಅನ್ನುವಂತೆ ಮಾಡ್ತಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಇತ್ತೀಚೆಗೆ ಅನೇಕ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೆ. ಬೆಂಗಳೂರು ನಗರ, ಈಗ ಬೆಂಗಳೂರು ಗ್ರಾಮಾಂತರ, ಇತರೆ ನಗರ ಪ್ರದೇಶದಲ್ಲಿ ಇದು ಹುಟ್ಟಿಕೊಂಡಿದೆ. ಬೆಂಗಳೂರು ಉತ್ತರ ವಿಭಾಗದ ಸಹಾಯಕ ಆಯುಕ್ತ ಕೆ.ರಂಗನಾಥ್ ವಿರುದ್ಧ ಕೇಳಿ ಬಂದಿರುವ ಅಕ್ರಮ ಭೂಮಿ ಮಂಜೂರು ಮಾಡಿರುವ ದೂರಿಗೆ ಸಂಬಂಧಿಸಿದಂತೆ ಎಸಿಬಿ ತನಿಖೆ ಆಗುತ್ತಿದೆ. ಇಡೀ ಪ್ರಕರಣವನ್ನು ವಿಶೇಷ ತನಿಖೆಗೊಳಪಡಿಸುವಂತೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು 24ಗಂಟೆಯಲ್ಲಿ ಇದೇ ರೀತಿ ಯಾವುದೇ ಪ್ರಕರಣ ಇದ್ದರೂ ಕೊಡಿ, ಎ.ಟಿ.ರಾಮಸ್ವಾಮಿ ಅವರ ಶ್ರಮ ವ್ಯರ್ಥ ಆಗಲು ಬಿಡೋದಿಲ್ಲ. ಯಾರೇ ತಪ್ಪಿತಸ್ತರಿದ್ರೂ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಕಂದಾಯ ಸಚಿವರು ಜೊತೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಜೊತೆಯೂ ಚರ್ಚೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು. ಇದರಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯರಾದ ಎಚ್.ಕೆ.ಪಾಟೀಲ್, ಕೆ.ಆರ್.ರಮೇಶ್ ಕುಮಾರ್ ಅವರು ಮಾತನಾಡಿದರು.







