ಉಕ್ರೇನ್ ನಿಂದ ಮರಳುತ್ತಿರುವ ವಿದ್ಯಾರ್ಥಿಗಳಿಗೆ ದೇಶದಲ್ಲಿ ವ್ಯಾಸಂಗ ಮುಂದುವರಿಸಲು ನೆರವಾಗಿ
ಪ್ರಧಾನಿಗೆ ತಮಿಳುನಾಡು ಸಿಎಂ ಆಗ್ರಹ

ಎಂ.ಕೆ.ಸ್ಟಾಲಿನ್
ಚೆನ್ನೈ,ಮಾ.7: ಉಕ್ರೇನ್ನಿಂದ ಮರಳುತ್ತಿರುವ ವಿದ್ಯಾರ್ಥಿಗಳು ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ತಮ್ಮ ವ್ಯಾಸಂಗ ಮುಂದುವರಿಸುವುದನ್ನು ಸಾಧ್ಯವಾಗಿಸಲು ಮಾರ್ಗವೊಂದನ್ನು ಕಂಡುಕೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಸರಕಾರವು ಕೈಗೊಳ್ಳುವ ಎಲ್ಲ ಪ್ರಯತ್ನಗಳಿಗೆ ತಮಿಳುನಾಡು ಸರಕಾರವು ನಿರಂತರ ಬೆಂಬಲವನ್ನು ನೀಡಲಿದೆ ಎಂದು ಅವರು ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಉಕ್ರೇನ್ನಲ್ಲಿಯ ಅಭೂತಪೂರ್ವ ಪರಿಸ್ಥಿತಿಯನ್ನು ಪರಿಗಣಿಸಿದರೆ ಈ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಲು ಅಲ್ಲಿಯ ತಮ್ಮ ಕಾಲೇಜುಗಳಿಗೆ ಮರಳುವುದು ಪ್ರಾಯೋಗಿಕವಾಗಿ ಸಾಧ್ಯವಾಗದಿರಬಹುದು. ಯುದ್ಧ ನಿಂತ ನಂತರವೂ ಮತ್ತು ಅವರ ವಿವಿಗಳಲ್ಲಿ ಸಹಜ ಸ್ಥಿತಿ ಮರಳುವವರೆಗೂ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಶಿಕ್ಷಣವನ್ನು ಮುಂದುವರಿಸುವ ಬಗ್ಗೆ ಸಾವಿರಾರು ವಿದ್ಯಾರ್ಥಿಗಳು ಎದುರಿಸುತ್ತಿರುವ ಅನಿಶ್ಚಿತ ಭವಿಷ್ಯವನ್ನು ಪತ್ರದಲ್ಲಿ ಪ್ರಧಾನಿಯವರ ಗಮನಕ್ಕೆ ತಂದಿರುವ ಸ್ಟಾಲಿನ್,ಈವರೆಗೆ 1,200ಕ್ಕೂ ಅಧಿಕ ವಿದ್ಯಾರ್ಥಿಗಳು ತಮಿಳುನಾಡಿಗೆ ಮರಳಿದ್ದಾರೆ ಮತ್ತು ಉಳಿದವರು ಮುಂದಿನ ದಿನಗಳಲ್ಲಿ ವಾಪಸಾಗುವ ನಿರೀಕ್ಷೆಯಿದೆ. ಪ್ರಸ್ತುತ ಪರಿಸ್ಥಿತಿಯು ಈಗಾಗಲೇ ಅವರ ವ್ಯಾಸಂಗಕ್ಕೆ ಅಡ್ಡಿಯನ್ನುಂಟು ಮಾಡಿದೆ ಮತ್ತು ಅವರ ಭವಿಷ್ಯದ ವೃತ್ತಿಜೀವನಕ್ಕೂ ಬೆದರಿಕೆಯೊಡ್ಡಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಸಂಬಂಧಿತ ಸಚಿವಾಲಯಗಳೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲು ಪ್ರಧಾನಿಯವರ ತುರ್ತು ಹಸ್ತಕ್ಷೇಪವನ್ನು ಆಗ್ರಹಿಸಿರುವ ಸ್ಟಾಲಿನ್, ಪೀಡಿತ ವಿದ್ಯಾರ್ಥಿಗಳು ತಮ್ಮ ಉಳಿಕೆ ವ್ಯಾಸಂಗವನ್ನು ಭಾರತದಲ್ಲಿಯ ವೈದ್ಯಕೀಯ ಕಾಲೇಜುಗಳಲ್ಲಿ ಮುಂದುವರಿಸಲು ಸಾಧ್ಯವಾಗುವಂತೆ ಮಾರ್ಗವೊಂದನ್ನು ತುರ್ತಾಗಿ ಕಂಡುಕೊಳ್ಳಲು ಅವುಗಳಿಗೆ ನಿರ್ದೇಶ ನೀಡಬಹುದಾಗಿದೆ ಎಂದು ಹೇಳಿದ್ದಾರೆ.







