ತಿರುವನಂತಪುರ: ಮನೆಗೆ ಹೊತ್ತಿಕೊಂಡ ಬೆಂಕಿ, 8 ತಿಂಗಳ ಮಗು ಸೇರಿದಂತೆ ಕುಟುಂಬದ 5 ಸದಸ್ಯರು ಮೃತ್ಯು

ತಿರುವನಂತಪುರ: ಮನೆಗೆ ಬೆಂಕಿಹೊತ್ತಿಕೊಂಡ ಪರಿಣಾಮ ಎಂಟು ತಿಂಗಳ ಮಗು ಸೇರಿದಂತೆ ಕುಟುಂಬದ ಐವರು ಸದಸ್ಯರು ಸುಟ್ಟುಕರಕಲಾಗಿರುವ ಘಟನೆ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಗಂಭೀರ ಸುಟ್ಟಗಾಯಗಳೊಂದಿಗೆ ಕುಟುಂಬದ ಸದಸ್ಯರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹವಾನಿಯಂತ್ರಣ ಸೇರಿದಂತೆ ಮನೆಯ ಒಳಭಾಗಗಳು ಬೆಂಕಿಗೆ ಆಹುತಿಯಾಗಿವೆ.
ಜಿಲ್ಲೆಯ ಉಪನಗರದ ವರ್ಕಲಾ ಬಳಿ ಈ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಮನೆಯೊಳಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತರನ್ನು ಪ್ರತಾಪನ್ (62), ಅವರ ಪತ್ನಿ ಶೆರ್ಲಿ (53), ಅವರ ಹಿರಿಯ ಮಗನ ಪತ್ನಿ ಅಭಿರಾಮಿ (25), ಕಿರಿಯ ಮಗ ಅಖಿಲ್(26) ಹಾಗೂ ಅಭಿರಾಮಿ ಅವರ ಎಂಟು ತಿಂಗಳ ಮಗು ರಾಯನ್ ಎಂದು ಗುರುತಿಸಲಾಗಿದೆ.
ಪ್ರತಾಪನ್ ಅವರ ಹಿರಿಯ ಮಗ ನಿಖಿಲ್ (29) ಗಂಭೀರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.







