ಉಕ್ರೇನ್ ಮೇಲೆ ಯುದ್ಧ ಸಾರಿದ ನಂತರ ಜಗತ್ತಿನಲ್ಲೇ ಗರಿಷ್ಠ ನಿರ್ಬಂಧಗಳನ್ನು ಎದುರಿಸುವ ರಾಷ್ಟ್ರವಾದ ರಷ್ಯಾ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (PTI)
ಮಾಸ್ಕೋ: ಉಕ್ರೇನ್ ಮೇಲೆ ಆಕ್ರಮಣ ಮಾಡಿದ ನಂತರ ರಷ್ಯಾ ಜಗತ್ತಿನಲ್ಲಿ ಅತ್ಯಂತ ಹೆಚ್ಚು ನಿರ್ಬಂಧಗಳನ್ನು ಎದುರಿಸುತ್ತಿರುವ ದೇಶವಾಗಿ ಬಿಟ್ಟಿದೆಯಲ್ಲದೆ ಈ ನಿಟ್ಟಿನಲ್ಲಿ ಇರಾನ್ ಮತ್ತು ಉತ್ತರ ಕೊರಿಯಾ ದೇಶಗಳನ್ನು ಹಿಂದಿಕ್ಕಿದೆ.
ಫೆಬ್ರವರಿ 10ರಿಂದ ಅಮೆರಿಕಾ ಮತ್ತು ಯುರೋಪಿಯನ್ ಮಿತ್ರ ಪಕ್ಷಗಳು ಒಟ್ಟು 2,778 ಹೊಸ ನಿರ್ಬಂಧಗಳನ್ನು ರಷ್ಯಾ ಮೇಲೆ ಹೇರಿದ ಪರಿಣಾಮ ಈಗ ರಷ್ಯಾ ಎದುರಿಸುತ್ತಿರುವ ನಿರ್ಬಂಧಗಳ ಸಂಖ್ಯೆ 5,530ಗೂ ಅಧಿಕವಾಗಿವೆ. ಇರಾನ್ ಮೇಲೆ ಕಳೆದೊಂದು ದಶಕದಲ್ಲಿ 3,616 ನಿರ್ಬಂಧಗಳಿವೆ.
ಉಕ್ರೇನ್ ಮೇಲೆ ಯುದ್ಧ ಸಾರಿದಂದಿನಿಂದ ನಿರ್ಬಂಧಗಳ ಮೂಲಕ ರಷ್ಯಾ ಪ್ರತಿದಿನವೆಂಬಂತೆ ಒತ್ತಡ ಎದುರಿಸುತ್ತಿದ್ದು ಅಮೆರಿಕನ್ ಎಕ್ಸ್ಪ್ರೆಸ್ ಕೋ. ಮತ್ತು ನೆಟ್ಫ್ಲಿಕ್ಸ್ ಇಂಕ್ ಕೂಡ ರಷ್ಯಾದಿಂದ ಹಿಂದೆ ಸರಿಯುವ ಅಥವಾ ಅಲ್ಲಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ಕಂಪೆನಿಗಳ ಪಟ್ಟಿಗೆ ಸೇರಿವೆ.
ಸದ್ಯ ಜಗತ್ತಿನಲ್ಲಿ ಗರಿಷ್ಠ ನಿರ್ಬಂಧಗಳನ್ನು ರಷ್ಯಾ ಎದುರಿಸುತ್ತಿದ್ದರೆ ನಂತರದ ಸ್ಥಾನಗಳಲ್ಲಿ ಇರಾನ್, ಸಿರಿಯಾ, ಉತ್ತರ ಕೊರಿಯ, ವೆನೆಜುವೆಲಾ, ಮ್ಯಾನ್ಮಾರ್, ಕ್ಯುಬಾ ಸೇರಿವೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವುದಕ್ಕಿಂತ ಮುನ್ನ ಅಮೆರಿಕಾದ ನಿರ್ಬಂಧಗಳು 2016ರ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ್ದಕ್ಕಾಗಿ ಹಾಗೂ ರಷ್ಯಾ ಮತ್ತು ವಿದೇಶಗಳಲ್ಲಿ ರಾಜಕೀಯ ವಿರೋಧಿಗಳ ಮೇಲೆ ದಾಳಿ ನಡೆಸಿದ್ದಕ್ಕಾಗಿ ಇದೆ.
ಆದರೆ ಫೆಬ್ರವರಿ 22ರ ನಂತರ ಹೇರಲಾಗಿರುವ ನಿರ್ಬಂಧಗಳ ಪೈಕಿ 2,427 ನಿರ್ಬಂಧಗಳು ವ್ಯಕ್ತಿಗಳ ಮೇಲೆ ಹಾಗೂ 343 ನಿರ್ಬಂಧಗಳು ಸಂಸ್ಥೆಗಳ ಮೇಲೆ ಇವೆ.
ರಷ್ಯಾ ವಿರುದ್ಧ ಸ್ವಿಝಲ್ರ್ಯಾಂಡ್ 568 ನಿರ್ಬಂಧಗಳನ್ನು ಹೇರಿದ್ದರೆ, ಫ್ರಾನ್ಸ್ 512 ನಿರ್ಬಂಧಗಳು, ಅಮೆರಿಕಾ 243 ನಿರ್ಬಂಧಗಳು ಹಾಗೂ ಯುರೋಪಿಯನ್ ಯೂನಿಯನ್ 518 ನಿರ್ಬಂಧಗಳನ್ನು ವಿಧಿಸಿವೆ.







