ಖಾಸಗೀಕರಣದ ಮೂಲಕ ಮೀಸಲಾತಿಯಿಂದ ವಂಚಿಸುವ ಹುನ್ನಾರ: ಶ್ಯಾಮರಾಜ್ ಬಿರ್ತಿ ಆರೋಪ
ಹೆಬ್ರಿ, ಮಾ.8: ಸರಕಾರಗಳು ಸರಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ, ಸಂವಿಧಾನದತ್ತವಾಗಿ ಪಡೆದ ಮೀಸಲಾತಿ ಯಿಂದ ನಮ್ಮನ್ನು ವಂಚಿತರನ್ನಾಗಿಸುವಂತೆ ಮಾಡುತ್ತಿದೆ. ಬಿಸ್ಸೆನ್ನೆಲ್, ರೈಲ್ವೆ, ಗ್ಯಾಸ್ ಕಂಪೆನಿ, ವಿಮಾನ ನಿಲ್ದಾಣ, ಎಲ್ಐಸಿ ಹೀಗೆ ಎಲ್ಲವನ್ನೂ ಖಾಸಗಿಯ ವರಿಗೆ ಮಾರಾಟ ಮಾಡುತ್ತಿದೆ ಎಂದು ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆರೋಪಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮುದ್ರಾಡಿ ಶಾಖೆ ವತಿಯಿಂದ ಮುದ್ರಾಡಿಯಲ್ಲಿ ಮಾ.6ರಂದು ಏರ್ಪಡಿಸಲಾದ ಅಂಬೇಡ್ಕರ್ ಟ್ರೋಫಿ ಕ್ರಿಕೆಟ್ ಪಂದ್ಯಾಟದ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡುತಿದ್ದರು.
ಮೊದಲು ಬಿಸ್ಸೆನ್ನೆಲ್‌ನಲ್ಲಿ ಸಾವಿರಾರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೌಕರರಿಗೆ ಸಿಗುತ್ತಿತ್ತು. ಈಗ ಬಂದಿರುವ ಏರ್‌ಟೆಲ್, ಜಿಯೋ ನಂತಹ ಖಾಸಗಿ ಕಂಪೆನಿಗಳಲ್ಲಿ ನಮಗೆ ಉದ್ಯೋಗ ಸಿಗಲು ಸಾಧ್ಯವೇ? ಎಲ್ಲಾ ಸರಕಾರಿ ಸಂಪತ್ತುಗಳನ್ನು ಖಾಸಗಿಯವರಿಗೆ ಒಪ್ಪಿಸಿ ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡಲಾಗುತ್ತಿದೆ. ಇದು ಸಂವಿಧಾನ ಬದಲಾಯಿಸದೇ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಅವಕಾಶ ಗಳಿಂದ ವಂಚಿತರನ್ನಾಗಿಸುವ ತಂತ್ರಗಾರಿಕೆಯಾಗಿದೆ ಎಂದು ಅವರು ಟೀಕಿಸಿದರು.
ಧರ್ಮವನ್ನು ಗುತ್ತಿಗೆ ಪಡೆದಂತೆ ಮಾತನಾಡುವ ನಾಯಕರು, ಧರ್ಮದ ಹೆಸರಿನಲ್ಲಿ ಬಡವರು, ಕೆಳವರ್ಗದ ಮಕ್ಕಳನ್ನು ಪ್ರಚೋದಿಸಿ, ಹೊಡೆಡಾಡುವಂತೆ ಮಾಡಿ ಸಾವಿನ ಕೂಪಕ್ಕೆ ತಳ್ಳುತ್ತಿದ್ದಾರೆ. ಆದರೆ ಅವರ ಮಕ್ಕಳು ವಿದೇಶಗಳಲ್ಲಿ ಓದಿ ಡಾಲರ್ ಲೆಕ್ಕದಲ್ಲಿ ಲಕ್ಷಾಂತರ ರೂ. ಸಂಪಾದಿಸುತ್ತಿದ್ದಾರೆ. ಕೇವಲ ಧರ್ಮದ ಮೌಢ್ಯದಲ್ಲಿ ಮುಳುಗಿರದೆ ಬಾಬಾ ಸಾಹೇಬರು ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟದಲ್ಲಿ ನಮ್ಮನ್ನು ಸಂಪೂರ್ಣ ತೊಗಿಸಿಕೊಳ್ಳಬೇಕು ಎಂದು ಅವರು ಯುವಜನತೆಗೆ ಕರೆ ನೀಡಿದರು.
ಪಂದ್ಯಾಟದಲ್ಲಿ ಸಿರಿಬೈಲು ದುರ್ಗಾಪರಮೇಶ್ವರಿ ಕ್ರಿಕೆಟ್ ತಂಡ ವಿನ್ನರ್ಸ್ ಹಾಗೂ ಬಂಗಾರಗುಡ್ಡೆಯ ಬಂಗಾರಗುಡ್ಡೆ ಫ್ರೆಂಡ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಇದೇ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೆ.ಎಸ್.ಕಲ್ಕೂರ್, ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪನಕ್ರೆ, ಹೆಬ್ರಿ ತಾಲೂಕು ಸಂಚಾಲಕ ದೇವು ಹೆಬ್ರಿ, ಗ್ರಾಪಂ ಸದಸ್ಯರಾದ ಸನತ್ ಕುಮಾರ್, ನಾರಾಯಣ ಬೇಣ ಉಪಸ್ಥಿತರಿದ್ದರು. ಹೆಬ್ರಿ ತಾಲೂಕು ಸಂಘಟನಾ ಸಂಚಾಲಕ ಜಯರಾಮ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಅಣ್ಣಪ್ಪ ಮಾಸ್ಟರ್ ಮುದ್ರಾಡಿ ವಂದಿಸಿದರು.