ರಾಜ್ಯದಲ್ಲಿ ನೂರು ಹೊಸ ಪೊಲೀಸ್ ಠಾಣೆ ಕಟ್ಟಡಗಳ ನಿರ್ಮಾಣ: ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಮಾ. 8: ‘ರಾಜ್ಯದಲ್ಲಿ ಹೊಸದಾಗಿ ನೂರು ಪೊಲೀಸ್ ಠಾಣೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದೇವೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ.ಸಂಗಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಾಗಲೇ ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಠಾಣೆಗಳನ್ನು ಆಧುನೀಕರಣಗೊಳಿಸಲಾಗುವುದು' ಎಂದು ಹೇಳಿಸಿದರು.
‘ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ಒಟ್ಟು ಆರು ಪೊಲೀಸ್ ಠಾಣೆಗಳಲ್ಲಿವೆ. ಆ ಪೈಕಿ ಭದ್ರಾವತಿ ಗ್ರಾಮಾಂತರ ಮತ್ತು ಸಂಚಾರಿ ಪೊಲೀಸ್ ಠಾಣೆ ಮತ್ತು ಪೇಪರ್‍ಟೌನ್ ಠಾಣೆಗಳು ಶಿಥಿಲಾವಸ್ಥೆಯಲ್ಲಿವೆ. ಹೊಸದಾಗಿ ಠಾಣೆ ನಿರ್ಮಿಸಲು ಜಾಗದ ಸಮಸ್ಯೆಯಿದೆ. ಒಂದು ವೇಳೆ ಶಾಸಕರು ನಿವೇಶನವನ್ನು ಕೊಡಿಸಿದರೆ ತಕ್ಷಣವೇ ನಾವು ಹೊಸ ಕಟ್ಟಡವನ್ನು ನಿರ್ಮಿಸಿಕೊಡುತ್ತೇವೆ' ಎಂದು ತಿಳಿದರು.
ಬಳಿಕ ಪ್ರತಿಕ್ರಿಯಿಸಿದ ಸದಸ್ಯ ಬಿ.ಕೆ.ಸಂಗಮೇಶ್, ‘ಮೈಸೂರು ಪೇಪರ್ ಮಿಲ್(ಎಂಪಿಎಂ)ನಲ್ಲಿ ನಿವೇಶನ ಕೊಡಿಸಲು ಸಾಧ್ಯವಿಲ್ಲ. ನೀವು ಮನಸ್ಸು ಮಾಡಿದರೆ ಆಗುತ್ತದೆ' ಎಂದರು. ನಾನು ಎಂಪಿಎಂನ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತನಾಡಿ, ನಿವೇಶನ ನೀಡಲು ಮನವಿ ಮಾಡುತ್ತೇನೆ. ಆ ಜಾಗದಲ್ಲಿ ಮಸೀದಿ, ಚರ್ಚ್‍ಗಳು ತಲೆ ಎತ್ತಿವೆ. ಕೂಡಲೇ ನಿವೇಶನ ಹಸ್ತಾಂತರಿಗೆ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.





