ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ವಿರೋಧಿಸಿ ಮೆನುವಿನಿಂದ ʼರಷ್ಯನ್ ಸಲಾಡ್ʼ ತೆಗೆದು ಹಾಕಿದ ಕೇರಳ ಕೆಫೆ

Photo: Twitter
ಕೊಚ್ಚಿ: ಉಕ್ರೇನ್ ಮೇಲೆ ಆಕ್ರಮಣ ಮಾಡಿದ ರಷ್ಯಾದ ಕ್ರಮವನ್ನು ವಿರೋಧಿಸಿ ಕೇರಳದ ಫೋರ್ಟ್ ಕೊಚ್ಚಿ ಪ್ರದೇಶದಲ್ಲಿರುವ ಕಾಶಿ ಆರ್ಟ್ ಕೆಫೆ & ಗ್ಯಾಲರಿ ತನ್ನ ಮೆನುವಿನಿಂದ ರಷ್ಯನ್ ಸಲಾಡ್ ಅನ್ನು ತೆಗೆದು ಹಾಕಿದೆ.
"ಉಕ್ರೇನ್ ಜನರನ್ನು ಬೆಂಬಲಿಸಿ ನಾವು ನಮ್ಮ ಮೆನುವಿನಿಂದ ರಷ್ಯನ್ ಸಲಾಡ್ ತೆಗೆದು ಹಾಕಿದ್ದೇವೆ" ಎಂದು ಕಾಶಿ ಆರ್ಟ್ ಕೆಫೆ ಹೊರಗೆ ಹಾಕಲಾಗಿರುವ ಒಂದು ಸಂದೇಶ ತಿಳಿಸುತ್ತದೆ. ಈ ಸಂದೇಶ ಫಲಕದ ಛಾಯಾಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ಮಂದಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಇದು ಯುದ್ಧವನ್ನು ಖಂಡಿಸುವ ಒಂದು ವಿಧಾನವಾಗಿದೆ ಎಂದು ಕೆಫೆ ಮಾಲೀಕ ಎಡ್ಗರ್ ಪಿಂಟೋ ಹೇಳಿದ್ದಾರೆ. "ಇದರಲ್ಲಿ ಪ್ರಚಾರದ ವಿಷಯವೇನೂ ಇಲ್ಲ. ಯುದ್ಧಕ್ಕೆ ಇಲ್ಲ ಎಂದು ಹೇಳಲು ನಾವು ಬಯಸಿದ್ದೇವೆ. ಕಲಾ ಪ್ರಿಯರಾದ ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಂಬಿಕೆಯಿರಿಸಿದ್ದೇವೆ ಹಾಗೂ ಈ ಮೂಲಕ ಉಕ್ರೇನ್ ಜನರಿಗೆ ಬೆಂಬಲ ಸೂಚಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಕೆಫೆಯ ಕ್ರಮ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವರು ಕೆಫೆಯ ಕ್ರಮವನ್ನು ಬೆಂಬಲಿಸಿದ್ದರೆ ಇನ್ನು ಕೆಲವರಿಗೆ ಇದರಿಂದ ಖುಷಿಯಾಗಿಲ್ಲ.
"ಈ ರೆಸ್ಟಾರೆಂಟ್ ತುಂಬಾ ಚೆನ್ನಾಗಿದೆ, ಹಲವು ಬಾರಿ ಭೇಟಿ ನೀಡಿದ್ದೇನೆ. ಆದರೆ ಈ ಕ್ರಮ ಹಾಸ್ಯಾಸ್ಪದ" ಎಂದು ನೊರ್ಥಂಬ್ರಿಯಾ ವಿವಿಯ ಹಿರಿಯ ಉಪನ್ಯಾಸಕ ಎಡ್ವರ್ಡ್ ಆಂಡರ್ಸನ್ ಹೇಳಿದ್ದಾರೆ. "ಇಂತಹ ಕ್ರಮಗಳು ಏನಾದರೂ ವ್ಯತ್ಯಾಸವನ್ನುಂಟು ಮಾಡಬಹುದೆಂಬಂತೆ ಜಗತ್ತು ಮುಂದೆ ಸಾಗುತ್ತಿದೆ" ಎಂದು ಇನ್ನೊಬ್ಬರು ಬರೆದಿದ್ದಾರೆ.
"ಕಾಶಿ ಆರ್ಟ್ ಕೆಫೆ, ಕೊಚ್ಚಿ, ಕೇರಳ, ಇವರು ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಿ ತಮ್ಮ ಮೆನುವಿನಿಂದ ರಷ್ಯನ್ ಸಲಾಡ್ ತೆಗೆದು ಹಾಕಿದ್ದಾರೆ" ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.







