ಕಲ್ಯಾಣ ಮಂಟಪ ಬುಕಿಂಗ್ ರದ್ದು: ಶೇ.10ರಷ್ಟು ಮುಂಗಡ ಮಾತ್ರ ಕಡಿತಕ್ಕೆ ಕೋರ್ಟ್ ಆದೇಶ

ಬೆಂಗಳೂರು, ಮಾ.8: ಕಲ್ಯಾಣ ಮಂಟಪಗಳನ್ನು ಮದುವೆ ಸಮಾರಂಭಗಳಿಗಾಗಿ ಕಾಯ್ದಿರಿಸಿ, ಕಾರಣಾಂತರಗಳಿಂದ ಸಮಾರಂಭ ರದ್ದಾದಾಗ ಮುಂಗಡ ಹಣದಲ್ಲಿ ಶೇ.10ರಷ್ಟು ಮಾತ್ರವೇ ಕಡಿತಗೊಳಿಸಬೇಕು ಎಂದು ನಗರದ ಗ್ರಾಹಕರ ಹಕ್ಕುಗಳ ವೇದಿಕೆ ತೀರ್ಪಿತ್ತಿದೆ.
ಬೆಂಗಳೂರು ನಗರದ ಮಾಗಡಿ ರಸ್ತೆ ನಿವಾಸಿ ಎನ್.ಚಂದ್ರಶೇಖರ್ ಎಂಬುವರು ತಮ್ಮ ಪುತ್ರನ ವಿವಾಹಕ್ಕಾಗಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ವೆಂಕಟೇಶ್ವರ ಸೇವಾ ಟ್ರಸ್ಟ್‍ನ ಕಲ್ಯಾಣ ಮಂಟಪವನ್ನು 2020ರ ಎಪ್ರಿಲ್ 5 ಮತ್ತು 6ಕ್ಕೆ ಕಾಯ್ದಿರಿಸಿದ್ದರು. ಜತೆಗೆ ಮುಂಗಡವಾಗಿ 1.47 ಲಕ್ಷ ರೂ. ಪಾವತಿ ಮಾಡಿದ್ದರು. ಆದರೆ, ಕೊರೋನ ಕಾರಣದಿಂದ ಮದುವೆ ರದ್ದುಗೊಳಿಸಲು ನಿರ್ಧರಿಸಿ ಮುಂಗಡವಾಗಿ ಪಾವತಿಸಿದ್ದ 1.47 ಲಕ್ಷ ರೂ. ಹಿಂದಿರುಗಿಸುವಂತೆ ಅವರು ಕೋರಿದ್ದರು.
ಇದರನ್ವಯ ಕಲ್ಯಾಣ ಮಂಟಪದ ಆಡಳಿತ ಮಂಡಳಿ 1.25 ಲಕ್ಷ ರೂ. ಹಿಂದಿರುಗಿಸಿದ್ದರು. ಉಳಿದ ಶೇ 18ರಷ್ಟು( 22 ಸಾವಿರ) ಹಣವನ್ನು ಸರಕಾರಕ್ಕೆ ತೆರಿಗೆ ಪಾವತಿ ಮಾಡಿರುವುದಾಗಿ ಹೇಳಿದ್ದರು. ಇದನ್ನು ಆಕ್ಷೇಪಿಸಿದ್ದ ದೂರುದಾರರು, ‘ಕಲ್ಯಾಣ ಮಂಟಪ ಕಾಯ್ದಿರಿಸಿದ ಬಳಿಕ ನಾವು ಸಭಾಂಗಣವನ್ನು ಬಳಕೆ ಮಾಡಿಲ್ಲ. ಹೀಗಾಗಿ, ತೆರಿಗೆ ಪಾವತಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದರು. ಆಡಳಿತ ಮಂಡಳಿ ಈ ವಾದವನ್ನು ಒಪ್ಪಿರಲಿಲ್ಲ.
ಈ ಸಂಬಂಧ ಚಂದ್ರಶೇಖರ್ ಸಲ್ಲಿಸಿದ್ದ ದೂರನ್ನು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಕೆ.ಎಸ್.ಬೀಳಗಿ ಮತ್ತು ಸದಸ್ಯೆ ರೇಣುಕಾದೇವಿ ದೇಶಪಾಂಡೆ ಅವರಿದ್ದ ಪೀಠ ವಿಚಾರಣೆ ನಡೆಸಿ, ಬುಕಿಂಗ್ ಮಾಡಿದ ದಿನಾಂಕದಿಂದ 150 ದಿನಗಳ ಒಳಗಾಗಿ ಮದುವೆ ಸಮಾರಂಭವನ್ನು ರದ್ದು ಮಾಡಿದಾಗ ಮುಂಗಡ ಹಣದಲ್ಲಿ ಶೇ.10ರಷ್ಟು ಮಾತ್ರವೇ ಕಡಿತಗೊಳಿಸಬೇಕು. ಅಲ್ಲದೆ, ‘ಕಲ್ಯಾಣ ಮಂಟಪದ ಮಾಲಕರು 22 ಸಾವಿರ ಜಿಎಸ್‍ಟಿ ಪಾವತಿಸಿರುವ ಸಂಬಂಧ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ಶೇ.18ರಷ್ಟು ಮೊತ್ತ ಕಡಿತ ಮಾಡಿರುವುದು ನಿಯಮ ಬಾಹಿರ. ಕೇವಲ ಶೇ.10ರಷ್ಟು ಮಾತ್ರವೇ ಕಡಿತ ಮಾಡಬೇಕಿತ್ತು. ಹೀಗಾಗಿ, ಇನ್ನುಳಿದ 7,700 ರೂ. ಮೊತ್ತವನ್ನು ದೂರುದಾರರಿಗೆ ಹಿಂದಿರುಗಿಸಬೇಕು ಎಂದು ದೂರನ್ನು ಭಾಗಶಃ ಪುರಸ್ಕರಿಸಿದೆ.







