1.5 ವರ್ಷದಲ್ಲಿ ಕುದುರೆ ಲಾಯ ನವೀಕರಣ: ಹೈಕೋರ್ಟ್ ಗೆ ಹೇಳಿಕೆ ನೀಡಿದ ಬಿಟಿಸಿ

ಬೆಂಗಳೂರು, ಮಾ.8: ಬೆಂಗಳೂರು ಟರ್ಫ್ ಕ್ಲಬ್‍ನಲ್ಲಿ(ಬಿಟಿಸಿ) ಕುದುರೆ ಲಾಯಗಳ ನವೀಕರಣ ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್‍ಗೆ ಟರ್ಫ್ ಕ್ಲಬ್ ಮಾಹಿತಿ ನೀಡಿದೆ.
ಬಿಟಿಸಿಯಲ್ಲಿ ರೇಸ್‍ಗಾಗಿ ಬಳಸುವ ಕುದುರೆಗಳ ಸುರಕ್ಷತೆ ಮತ್ತು ಯೋಗ ಕ್ಷೇಮಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಸರಕಾರೇತರ ಸಂಸ್ಥೆಯಾದ ಕ್ಯೂಪಾ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಟರ್ಫ್ ಕ್ಲಬ್ ಪರ ವಕೀಲರು ಹಾಜರಾಗಿ, ಕೋರ್ಟ್ ಸೂಚನೆಯಂತೆ ಭಾರತೀಯ ಪ್ರಾಣಿ ಮಂಡಳಿ(ಎಡಬ್ಲುಬಿಐ) ನೇಮಿಸಿದ್ದ ಇನ್‍ಸ್ಪೆಕ್ಟರ್ ಬೆಂಗಳೂರು ಟರ್ಫ್ ಕ್ಲಬ್‍ನಲ್ಲಿ ಕಲ್ಪಿಸಲಾಗಿರುವ ಸೌಲಭ್ಯ ಮತ್ತು ಅಭಿವೃದ್ಧಿಗಳ ಕುರಿತು 2022ರ ಜ.3ರಂದು ಪರಿಶೀಲಿಸಿ ವರದಿ ನೀಡಿದ್ದಾರೆ.
ಪ್ರಕರಣದಲ್ಲಿ ಕಾಲಕಾಲಕ್ಕೆ ನ್ಯಾಯಾಲಯದ ನೀಡಿರುವ ನಿರ್ದೇಶನಗಳನ್ನು ಭಾಗಶಃ ಪಾಲಿಸಲಾಗಿದೆ. ಕುದುರೆಲಾಯ ನವೀಕರಣ ಮತ್ತು ಉನ್ನತೀಕರಣ ಕಾರ್ಯ ನಡೆದಿದ್ದು, ಪೂರ್ಣಗೊಳ್ಳಲು ಒಂದೂವರೆ ವರ್ಷ ಕಾಲಾವಕಾಶ ಬೇಕಿದೆ ಎಂದು ಮನವಿ ಮಾಡಿದರು.







