ರಾಜಕೀಯ ದ್ವೇಷದಿಂದ ಹೆಚ್ಚು ಹತ್ಯೆಗಳು ನಡೆಯುತ್ತಿವೆ: ಹೈಕೋರ್ಟ್

ಬೆಂಗಳೂರು, ಮಾ.8: ಇತ್ತೀಚಿನ ದಿನಗಳಲ್ಲಿ ರಾಜಕೀಯ ದ್ವೇಷದಿಂದಲೇ ಅತಿ ಹೆಚ್ಚು ಹತ್ಯೆಗಳು ನಡೆಯುತ್ತಿವೆ. ತಾನು ಬೆಳೆಯುವುದಕ್ಕೆ ಅಡ್ಡಿ ಎಂಬ ಕಾರಣಕ್ಕಾಗಿ ಹತ್ಯೆ ನಡೆಯುತ್ತಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಕೊಲೆ ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ರಾಜಕೀಯ ಕಾರಣಗಳಿಗೆ ಹತ್ಯೆ ನಡೆಯುತ್ತಿರುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಿ ಅಭಿಯೋಜಕರಿಗೆ ಸೂಚಿಸಿ ವಿಚಾರಣೆ ಮುಂದೂಡಿತು. ಈ ವೇಳೆ ಮಧ್ಯಪ್ರವೇಶಿಸಿದ ಆರೋಪಿ ಪರ ವಕೀಲರು, ಅರ್ಜಿದಾರರು ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಚಾರ್ಜ್‍ಶೀಟ್ ಕೂಡ ಸಲ್ಲಿಕೆಯಾಗಿದೆ. ಅರ್ಜಿದಾರರನ್ನು ಅನಗತ್ಯವಾಗಿ ಬಂಧಿಸಿಡಲಾಗಿದೆ. ಹೀಗಾಗಿ, ಅರ್ಜಿದಾರರಿಗೆ ಜಾಮೀನು ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸುಖಾಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ. ಈ ಪ್ರಕರಣದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಇತ್ತೀಚೆಗೆ ಹೆಚ್ಚು ಕೊಲೆಗಳು ನಡೆಯುತ್ತಿರುವುದೇ ಮೂರು ಕಾರಣಗಳಿಗೆ. ಅನೈತಿಕ ಸಂಬಂಧ, ಯಾವುದಾದರೂ ಲಾಭಕ್ಕಾಗಿ, ಇಲ್ಲವೇ ರಾಜಕೀಯ ದ್ವೇಷಕ್ಕೆ. ಈ ಕಾರಣ ಇರದಿದ್ದರೆ ಅಷ್ಟು ಸುಲಭದಲ್ಲಿ ಹತ್ಯೆಗಳು ನಡೆಯುವುದಿಲ್ಲ. ಗ್ರಾಮ ಪಂಚಾಯಿತಿ ಹಂತದಲ್ಲಿ ರಾಜಕೀಯ ಪಕ್ಷಗಳನ್ನು ಹೊರಗಿಡಲಾಗಿದೆ. ಹಾಗಿದ್ದೂ, ಇಂದು ಗ್ರಾಮಗಳಲ್ಲಿ ರಾಜಕೀಯ ದ್ವೇಷ ಹೆಚ್ಚುತ್ತಿದೆ ಎಂದು ಪೀಠ ಬೇಸರ ವ್ಯಕ್ತಪಡಿಸಿತು.







