ಗ್ರಾಮ ಪಂಚಾಯತ್ ಸದಸ್ಯರ ಗೌರವ ಧನ ಹೆಚ್ಚಳಕ್ಕೆ ವಿಧಾನ ಪರಿಷತ್ತಿನಲ್ಲಿ ಪಟ್ಟು ಹಿಡಿದ ಶಾಸಕರು

ಬೆಂಗಳೂರು, ಮಾ.8: ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿ ಸದಸ್ಯರ ಗೌರವ ಧನ ಮತ್ತು ನೌಕರರ ವೇತನ ಹೆಚ್ಚಳ ಮಾಡುವಂತೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಸದಸ್ಯರು ಪಕ್ಷಾತೀತವಾಗಿ ಸರಕಾರವನ್ನು ಆಗ್ರಹಿಸಿದರು.
ಮಂಗಳವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಹಲವು ಸದಸ್ಯರು ಪ್ರಸ್ತಾಪಿಸಿ, ಕೇರಳ ಮಾದರಿಯಲ್ಲಿ ಗ್ರಾ.ಪಂ. ಸದಸ್ಯರು, ಉಪಾಧ್ಯಕ್ಷರು ಮತ್ತು ಅಧ್ಯಕ್ಷರಿಗೆ ಗೌರವಧನ ಪರಿಷ್ಕರಣೆ ಮಾಡುವಂತೆ ಒತ್ತಾಯ ಮಾಡಿದರು.
ಆರಂಭದಲ್ಲಿ ನಿಯಮ 330 ರಡಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಸಲೀಂ ಅಹ್ಮದ್, ಚನ್ನರಾಜ ಹಟ್ಟಿಹೊಳಿ, ರಾಜೇಂದ್ರ ರಾಜಣ್ಣ, ಬಿಜೆಪಿಯ ಟಿ.ಎ.ಅರುಣ್, ಎಂ.ಕೆ.ಪ್ರಾಣೇಶ್ ಸೇರಿದಂತೆ ಕೆಲವು ಸದಸ್ಯರ ಗ್ರಾ.ಪಂ. ಸದಸ್ಯರ ಗೌರವಧನ ಹೆಚ್ಚಳ ಮಾಡುವಂತೆ ಒತ್ತಾಯಿಸಿದರು.
ಅದು ಅಲ್ಲದೆ, 2014 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 250 ರೂಪಾಯಿ ಇದ್ದ ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನವನ್ನು 500 ರೂಪಾಯಿಗೆ, ಉಪಾಧ್ಯಕ್ಷರಿಗೆ 600 ರೂ. ಹಾಗೂ ಅಧ್ಯಕ್ಷರಿಗೆ 1 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. 2016 ರಲ್ಲಿ ಮತ್ತೆ ಪರಿಷ್ಕರಣೆ ಮಾಡಿ ಸದಸ್ಯರಿಗೆ 1 ಸಾವಿರ, ಉಪಾಧ್ಯಕ್ಷರಿಗೆ 2 ಸಾವಿರ ಹಾಗೂ ಅಧ್ಯಕ್ಷರಿಗೆ 3 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿತ್ತು. ಆ ನಂತರ ಗೌರವಧನವನ್ನು ಪರಿಷ್ಕರಣೆ ಮಾಡಿಲ್ಲ ಎಂದು ಸದಸ್ಯರು ಹೇಳಿದರು.







