ಭಾಷೆ ಬಳಕೆಯ ಪ್ರದರ್ಶಕ ಕಲೆಗಳಲ್ಲಿ ಯಕ್ಷಗಾನದ ಕೊಡುಗೆ ಅಪಾರ: ರಂಗಕರ್ಮಿ ಗೋಪಾಲಕೃಷ್ಣ ನಾಯರಿ
ಬ್ರಹ್ಮಾವರ, ಮಾ.8: ಭಾಷೆ ಬಳಕೆಯ ಪ್ರದರ್ಶಕ ಕಲೆಗಳಲ್ಲಿ ಯಕ್ಷಗಾನಕ್ಕಿರುವ ಶಕ್ತಿ ನಾಟಕವೂ ಸೇರಿದಂತೆ ಬೇರಾವುದೇ ಕಲೆಗಳಿಗೂ ಇಲ್ಲ ಎಂದು ಖ್ಯಾತ ರಂಗಕರ್ಮಿ ಹಾಗೂ ಬೆಂಗಳೂರಿನ ಸಮಸ್ತರು ರಂಗ ಸಂಶೋಧನಾ ಕೇಂದ್ರದ ಮುಖ್ಯಸ್ಥ ಗೋಪಾಲಕೃಷ್ಣ ನಾಯರಿ ಹೇಳಿದ್ದಾರೆ.
ಸಾಲಿಗ್ರಾಮದ ಗುಂಡ್ಮಿ ಸದಾನಂದ ರಂಗಮಂಟಪದಲ್ಲಿ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಮತ್ತು ಸಮಸ್ತರು ರಂಗ ಸಂಶೋಧನಾ ಕೆಂದ್ರ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಯಕ್ಷೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಲೆ ಎಂಬುದು ಮನುಷ್ಯನಿಗೆ ಜೈವಿಕ ಅನಿವಾರ್ಯತೆ ಹಾಗೂ ಕಲೆಯ ಬಳಕೆ ಯಲ್ಲಿ ಮನುಷ್ಯನ ವಿಕಸನ ವೌಲ್ಯೀಕೃತವಾಗಿರುತ್ತದೆ. ಶಿಸ್ತುಬದ್ಧ ರಂಗಪ್ರಕ್ರಿಯೆ ಗಳಲ್ಲಿ ಭಾಗಿಯಾದ ಕಲಾವಿದರು ಸಮಾಜಮುಖಿ ಹಾಗೂ ಸಮಸಮಾಜದ ಕನಸುಗಳನ್ನು ಹೊಂದಿರುತ್ತಾರೆ. ಆದರೆ ಯಕ್ಷಗಾನ ಕಲಾವಿದರು ಇಂಥ ಪ್ರಕ್ರಿಯೆ ಯಿಂದ ವಂಚಿತರಾಗುತಿದ್ದಾರೆ ಎಂದರು.
ಪುರಾಣ ಕಥನ, ಹೆಜ್ಜೆಗಾರಿಕೆ, ಮಾತುಗಾರಿಕೆಗಳ ಕಲಿಕೆಗೆ ಸಾಕಷ್ಟು ಸಮಯ ತೆಗೆದುಕೊಂಡರೂ, ಪ್ರಸಂಗವೊಂದರ ಪಾತ್ರ ನಿರ್ವಹಣೆಗೆ ರಂಗಭೂಮಿ ಯವರಂತೆ ಶಿಸ್ತುಬದ್ಧ ತಾಲೀಮಿನ ಪ್ರಕ್ರಿಯೆಗೆ ಒಳಗಾಗದೇ ಇರುವುದರಿಂದ ಹೆಚ್ಚಿನ ಯಕ್ಷಗಾನ ಕಲಾವಿದರಲ್ಲಿ ಸಮಸಮಾಜದ ಭಾವ ರೂಪುಗೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ತಾಳಮದ್ದಲೆ ಕಲಾವಿದೆ ಚಂದ್ರಿಕಾ ಧನ್ಯ, ಪತ್ರಕರ್ತ ಶೇಷಗಿರಿ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಗೆ ಸುಧನ್ವ ಕಾಳಗ ಮತ್ತು ಧ್ರುವ ಚರಿತ್ರೆ ಯಕ್ಷಗಾನ ಪ್ರಯೋಗಗಳು ನಡೆದವು.