ಮತಎಣಿಕೆಗೆ ಮುನ್ನ ವಿವಿಪ್ಯಾಟ್ ಚೀಟಿಗಳ ಪರಿಶೀಲನೆ ಕೋರಿರುವ ಅರ್ಜಿ ಬುಧವಾರ ಸುಪ್ರೀಂನಲ್ಲಿ ವಿಚಾರಣೆ

ಹೊಸದಿಲ್ಲಿ,ಮಾ.8: ಮತ ಎಣಿಕೆಗೆ ಮುನ್ನ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ವಿವಿಪ್ಯಾಟ್ ಚೀಟಿಗಳ ಪರಿಶೀಲನೆಗೆ ನಿರ್ದೇಶ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ನಡೆಸಲಿದೆ.
ವಿವಿಪ್ಯಾಟ್ ಮತದಾರ ತನ್ನ ಮತವನ್ನು ಚಲಾಯಿಸಿದ ಬಳಿಕ ಅಭ್ಯರ್ಥಿಯ ಹೆಸರು,ಕ್ರಮಸಂಖ್ಯೆ ಮತ್ತು ಪಕ್ಷದ ಚಿಹ್ನೆಯನ್ನು ಮುದ್ರಿಸುವ ಯಂತ್ರವಾಗಿದೆ. ಚುನಾವಣಾ ವಂಚನೆಯನ್ನು ತಪ್ಪಿಸಲು ತಮ್ಮ ಮತವು ತಮ್ಮ ಆಯ್ಕೆಯ ಅಭ್ಯರ್ಥಿಗಳಿಗೆ ಬಿದ್ದಿದೆ ಎನ್ನುವುದನ್ನು ಮತದಾರರು ದೃಢಪಡಿಸಿಕೊಳ್ಳಲು ಯಂತ್ರವು ಮುದ್ರಿತ ಚೀಟಿಯನ್ನು ಏಳು ಸೆಕೆಂಡ್‌ಗಳ ಕಾಲ ಪ್ರದರ್ಶಿಸುತ್ತದೆ. ಬಳಿಕ ಚೀಟಿಯು ಲಾಕ್ ಮಾಡಿದ ಕಂಪಾರ್ಟ್‌ಮೆಂಟ್‌ಗೆ ಬೀಳುತ್ತದೆ ಮತ್ತು ಚುನಾವಣಾ ಏಜೆಂಟ್ ಮಾತ್ರ ಅದನ್ನು ನೋಡಬಹುದು.
ಆರ್‌ಟಿಐ ಕಾರ್ಯಕರ್ತ ರಾಕೇಶ ಕುಮಾರ ಸಲ್ಲಿಸಿರುವ ಅರ್ಜಿಯನ್ನು ಹಿರಿಯ ನ್ಯಾಯವಾದಿ ಮೀನಾಕ್ಷಿ ಅರೋರಾ ಅವರು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರೆದುರು ಬುಧವಾರ ತುರ್ತು ವಿಚಾರಣೆಗಾಗಿ ಉಲ್ಲೇಖಿಸಿದರು.
ಗೋವಾ,ಮಣಿಪುರ,ಉತ್ತರ ಪ್ರದೇಶ,ಉತ್ತರಾಖಂಡ ಮತ್ತು ಪಂಜಾಬಗಳಲ್ಲಿ ಮತಗಳ ಎಣಿಕೆಯು ಗುರುವಾರ ನಡೆಯಲಿದೆ.
ಪ್ರಸ್ತುತ ಮತ ಎಣಿಕೆಯ ಬಳಿಕವಷ್ಟೇ ವಿವಿಪ್ಯಾಟ್ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಇದು ಪ್ರಕ್ರಿಯೆಯನ್ನು ವಿವಾದಾಸ್ಪದವಾಗಿಸುತ್ತದೆ. ಮತ ಎಣಿಕೆ ಮುಗಿದ ಬಳಿಕ ಎಲ್ಲ ಚುನಾವಣಾ ಏಜೆಂಟರು ಅಲ್ಲಿಂದ ತೆರಳಿರುತ್ತಾರೆ,ಹೀಗಾಗಿ ಯಾವುದೇ ಪಾರದರ್ಶಕತೆ ಇರುವುದಿಲ್ಲ. ಮತ ಎಣಿಕೆಗೆ ಮುನ್ನ ಏಜೆಂಟರು, ಪಕ್ಷಗಳು ಮತ್ತು ಅಭ್ಯರ್ಥಿಗಳು ಉಪಸ್ಥಿತರಿದ್ದಾಗಲೇ ವಿವಿಪ್ಯಾಟ್ ಚೀಟಿಗಳ ಪರಿಶಲನೆಯನ್ನು ನಡೆಸಬೇಕು ಎಂದು ಅರೋರಾ ವಾದಿಸಿದರು.
ಮತ ಎಣಿಕೆಗೆ ಕೇವಲ ಎರಡು ದಿನಗಳು ಬಾಕಿಯಿರುವಾಗ ಅರ್ಜಿಯನ್ನು ಸಲ್ಲಿಸಿದ್ದೇಕೆ? ನೀವು ಕೊನೆಯ ಕ್ಷಣದಲ್ಲಿ ನ್ಯಾಯಾಲಯಕ್ಕೆ ಬಂದರೆ ನಾವು ನೆರವಾಗುವುದಾದರೂ ಹೇಗೆ? ನಾಡಿದ್ದೇ ಮತಗಳ ಎಣಿಕೆ ನಡೆಯಲಿದೆ. ನಾವು ನಾಳೆ ವಿಚಾರಣೆ ನಡೆಸಿದರೂ ನಿರ್ದೇಶವನ್ನು ಹೊರಡಿಸುವುದು ಹೇಗೆ ಎಂದು ನ್ಯಾ.ರಮಣ ಪ್ರಶ್ನಿಸಿದರು.
ಪ್ರಕರಣದಲ್ಲಿ ಚುನಾವಣಾ ಆಯೋಗವನ್ನು ಕಕ್ಷಿಯನ್ನಾಗಿ ಮಾಡಬಹುದು ಎಂಬ ಅರೋರಾರ ಸಲಹೆಯನ್ನು ಒಪ್ಪಿಕೊಂಡ ಸರ್ವೋಚ್ಚ ನ್ಯಾಯಾಲಯವು,ಬುಧವಾರದ ವಿಚರಣೆ ಸಂದರ್ಭ ಹಾಜರಿರುವಂತೆ ಆಯೋಗಕ್ಕೆ ನಿರ್ದೇಶ ನೀಡಿತು.
ವಿವಿಪ್ಯಾಟ್ ಪರಿಶೀಲನೆಯನ್ನು ನಡೆಸಲಾಗುವ ವಿಧಾನಸಭಾ ಕ್ಷೇತ್ರದಲ್ಲಿಯ ಮತಗಟ್ಟೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆಯೂ ಅರ್ಜಿದಾರರು ಕೋರಿದ್ದಾರೆ. 2019ರ ಪ್ರಕರಣವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಪ್ರಸ್ತುತ ವಿಧಾನಸಭಾ ಕ್ಷೇತ್ರದಲ್ಲಿಯ ಐದು ಮತಗಟ್ಟೆಗಳನ್ನು ವಿವಿಪ್ಯಾಟ್ ಚೀಟಿಗಳ ಪರಿಶೀಲನೆಗಾಗಿ ಯಾದ್ರಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿದಾರರು ಮತಗಟೆಗಳ ಸಂಖ್ಯೆಯನ್ನು 25ಕ್ಕೆ ಅಥವಾ ವಿಧಾನಸಭಾ ವಿಭಾಗದ ಅನುಪಾತಕ್ಕೆ ಅನುಗುಣವಾಗಿ ಹೆಚ್ಚಿಸುವಂತೆ ಕೋರಿದ್ದಾರೆ.







