ಹೊಸದಿಲ್ಲಿ ತಲುಪಿದ ಉಡುಪಿ ಜಿಲ್ಲೆಯ ಗ್ಲೆನ್‌ವಿಲ್ ಫೆರ್ನಾಂಡೀಸ್
ಉಕ್ರೇನಿನಲ್ಲಿದ್ದ ವಿದ್ಯಾರ್ಥಿ
ಉಡುಪಿ, ಮಾ.8: ಯುದ್ಧಪೀಡಿತ ಉಕ್ರೇನಿನಲ್ಲಿದ್ದ ಉಡುಪಿ ಜಿಲ್ಲೆಯ ಏಳನೇ ಹಾಗೂ ಕೊನೆಯ ವಿದ್ಯಾರ್ಥಿ ಕೆಮ್ಮಣ್ಣಿನ ಗ್ಲೆನ್‌ವಿಲ್ ಫೆರ್ನಾಂಡೀಸ್ ಇಂದು ಬೆಳಗ್ಗೆ ಸುರಕ್ಷಿತವಾಗಿ ಹೊಸದಿಲ್ಲಿಗೆ ಆಗಮಿಸಿದ್ದಾರೆ. ಈ ಮೂಲಕ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಇರುವ ಜಿಲ್ಲೆಯ ಎಲ್ಲಾ ಏಳು ಮಂದಿ ವಿದ್ಯಾರ್ಥಿಗಳೂ ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿ ಬಂದಂತಾಗಿದೆ.
ಕೊನೆಯವರಾಗಿ ಉಕ್ರೇನಿನಲ್ಲಿದ್ದ ಜಿಲ್ಲೆಯ ಗ್ಲೆನ್‌ವಿಲ್ ಫೆರ್ನಾಂಡೀಸ್ ನಿನ್ನೆ ಬಸ್‌ನಲ್ಲಿ ರೊಮೇನಿಯಾ ಗಡಿ ತಲುಪಿದ್ದು, ಅಲ್ಲಿಂದ ರಾಜಧಾನಿ ಬುಕಾರೆಸ್ಟ್‌ಗೆ ಬಂದಿದ್ದರು. ರಾತ್ರಿಯೇ ಅಲ್ಲಿಂದ ವಿಮಾನದಲ್ಲಿ ಹೊರಟಿದ್ದ ಅವರು ಇಂದು ಬೆಳಗ್ಗೆ ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ತಲುಪಿದ್ದರು. ಗ್ಲೆನ್‌ವಿಲ್ ನಾಳೆ ಬೆಳಗ್ಗೆ ಕೆಮ್ಮಣ್ಣಿನ ತಮ್ಮ ಮನೆಗೆ ಆಗಮಿಸುವ ನಿರೀಕ್ಷೆ ಇದೆ.
ಕಲ್ಯಾಣಪುರದ ವಿಲಿಯಂ ಡಿಸೋಜರ ಪುತ್ರಿ ಅನಿಫ್ರೆಡ್ ರಿಡ್ಲೆ ಡಿಸೋಜ (20) ಸೋಮವಾರ ಸಂಜೆ ಬೆಂಗಳೂರಿಂದ ಮಂಗಳೂರಿನ ಮೂಲಕ ತನ್ನ ಮನೆಗೆ ಸುರಕ್ಷಿತವಾಗಿ ತಲುಪಿದ್ದರು. ಜಿಲ್ಲೆಯ ಉಳಿದ ಐವರು ವಿದ್ಯಾರ್ಥಿಗಳು ಫೆ.28ರಿಂದ ಪ್ರಾರಂಭಿಸಿ ಒಬ್ಬೊಬ್ಬರೇ ಮನೆಗೆ ಮರಳಿ ಬಂದಿದ್ದರು.