ರಾಜ್ಯದ ಐದು ವಲಯಗಳಲ್ಲಿ ಕೈಗಾರಿಕಾ ಟೌನ್‍ಶಿಪ್ ಸ್ಥಾಪನೆ: ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು, ಮಾ.8: ರಾಜ್ಯದ ಐದು ವಲಯಗಳಲ್ಲಿ ಕೈಗಾರಿಕಾ ಟೌನ್‍ಶಿಪ್‍ಗಳನ್ನು ಸ್ಥಾಪನೆ ಮಾಡುವ ಮೂಲಕ ಕೈಗಾರಿಕೆಗಳನ್ನು ಎರಡನೇ ಹಂತದ ನಗರಗಳಿಗೂ ವಿಸ್ತರಿಸಲು ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಮಂಗಳವಾರ ವಿಧಾನಪರಿಷತ್ತಿನ ಕಲಾಪದಲ್ಲಿ ಅವರು, ಕೈಗಾರಿಕಾ ಟೌನ್‍ಶಿಪ್‍ಗಳ ಬಳಿಯೇ ಜನವಸತಿ ಪ್ರದೇಶಗಳನ್ನು ನಿರ್ಮಾಣ ಮಾಡುವ ಮೂಲಕ ವಾಕ್ ಟು ವರ್ಕ್‍ಗೆ ಆದ್ಯತೆ ನೀಡಲಾಗುವುದು ಎಂದು ನುಡಿದರು.
ರಾಜ್ಯದ 2ನೆ ಹಂತದ ನಗರಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಎನ್ನುವುದು ಸರಕಾರದ ಉದ್ದೇಶ ಎಂದ ಅವರು, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಮುಂದೆ ಬರುವ ಹೂಡಿಕೆದಾರರಿಗೆ ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ನೀಡುವುದನ್ನು ಕಡಿಮೆ ಮಾಡಲಾಗಿದೆ ಎಂದರು.
ಡಾ.ಸರೋಜಿನಿ ಮಹಿಷಿ ವರದಿಯನ್ವಯ ರಾಜ್ಯದ ಕೈಗಾರಿಕೆಗಳಲ್ಲಿ ಶೇ. 85 ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ನೀಡಬೇಕು. ಇದರಲ್ಲಿ ಯಾವುದೇ ಲೋಪವಾಗಿದ್ದರೆ ಅಂತಹ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದೀಚೆಗೆ ಹಲವು ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದ್ದು, 1,815 ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ ಎಂದು ತಿಳಿಸಿದರು.





