ಭೂಕಂದಾಯ ಕಾಯ್ದೆಯ ‘192 ಎ’ಗೆ ತಿದ್ದುಪಡಿ ತರಲಾಗುವುದು: ಸಚಿವ ಜೆ.ಸಿ.ಮಾಧುಸ್ವಾಮಿ
ಅರಣ್ಯ ಭೂಮಿ ಕೃಷಿ ಉದ್ದೇಶಕ್ಕೆ ಒತ್ತುವರಿ ವಿಚಾರ

ಬೆಂಗಳೂರು, ಮಾ. 8: ‘ಅರಣ್ಯದಂಚಿನ ಗ್ರಾಮಗಳ ಜನರು ಕೃಷಿ ಉದ್ದೇಶಕ್ಕಾಗಿ ಒತ್ತುವರಿ ಮಾಡಿದ್ದರೆ ಅದನ್ನು ಭೂ ಕಬಳಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದನ್ನು ಕೈಬಿಡಲು ‘ಕಂದಾಯ ಕಾಯ್ದೆ'ಗೆ ಅಗತ್ಯ ತಿದ್ದುಪಡಿ ತರಲಾಗುವುದು' ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಚ್.ಕೆ.ಪಾಟೀಲ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲೂರು ಗ್ರಾಮದಲ್ಲಿ ಅರಣ್ಯ ಭೂಮಿಯನ್ನು ಕೃಷಿ ಉದ್ದೇಶಕ್ಕೆ ಒತ್ತುವರಿ ಮಾಡಿದ್ದು, ಅಧಿಕಾರಿಗಳು ವಿವೇಚನೆ ಇಲ್ಲದ ವರ್ತನೆ ಮಾಡಿದ್ದನ್ನು ಸಹಿಸಲು ಸಾಧ್ಯವಿಲ್ಲ' ಎಂದು ಹೇಳಿದರು.
‘ಕಂದಾಯ ಕಾಯ್ದೆಯಲ್ಲಿ ಒತ್ತುವರಿಯನ್ನು ಭೂ ಕಬಳಿಕೆ ಎಂದು ಪರಿಗಣಿಸಲಾಗಿದೆ. ಇದರಿಂದ ಜನರಿಗೆ ತೊಂದರೆಗಳಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಜನರಿಗೆ ಕಿರುಕುಳ ಆಗಬಾರದು ಎಂಬುದು ಸರಕಾರದ ಸ್ಪಷ್ಟ ನಿಲುವು. ಹೀಗಾಗಿ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಒತ್ತುವರಿಯನ್ನು ಭೂಕಬಳಿಕೆ ಎಂಬ ಕಾನೂನನ್ನು ಕೈಬಿಡಲು ಕ್ರಮ ಕೈಗೊಳ್ಳುವುದು' ಎಂದು ಮಾಧುಸ್ವಾಮಿ ಸದನಕ್ಕೆ ಭರವಸೆ ನೀಡಿದರು.
ಸದನ ಸಮಿತಿ ರಚನೆಗೆ ಒತ್ತಾಯ: ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಎಚ್.ಕೆ.ಪಾಟೀಲ್, ‘ಅರಣ್ಯ ಭೂಮಿ ಕೃಷಿ ಉದ್ದೇಶಕ್ಕೆ ಒತ್ತುವರಿ ಪಡಿಸಿಕೊಂಡಿದ್ದನ್ನು ಭೂ ಕಬಳಿಕೆ ಎಂದು 776 ಪ್ರಕರಣ ದಾಖಲಿಸಿ, ಮುಗ್ಧ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ನಿನ್ನೆ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿದ್ದು, ಒಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಮಹಿಳೆ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
‘ಭೂ ಕಬಳಿಕೆ ಕಾನೂನು ಬಗರ್ ಹುಕುಂ ಸಾಗುವಳಿದಾರರ ವಿರುದ್ದ ದುರ್ಬಳಕೆ ಮಾಡುವುದು ಸರಿಯಲ್ಲ. ಅಧಿಕಾರಿಗಳ ಬಲಪ್ರಯೋಗ ಅಕ್ಷಮ್ಯ. ಮೃತ ಮಹಿಳೆಯ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ನೀಡಬೇಕು. ಜೊತೆಗೆ ಈ ಪ್ರಕರಣದ ಪರಿಶೀಲನೆಗೆ ಸದನ ಸಮಿತಿ ರಚನೆ ಮಾಡಬೇಕು' ಎಂದು ಸರಕಾರವನ್ನು ಆಗ್ರಹಿಸಿದರು.
ಇದಕ್ಕೆ ದ್ವನಿಗೂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ರಮೇಶ್ ಕುಮಾರ್, ‘ಕೃಷಿ ಉದ್ದೇಶಗಳಿಗೆ ಅರಣ್ಯ ಭೂಮಿ ಒತ್ತುವರಿ ಮಾಡಿದರೆ ಭೂ ಕಬಳಿಕೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸುತ್ತಿರುವುದು ಸರಿಯಲ್ಲ. ಈ ಕಿರುಕುಳವನ್ನು ತಪ್ಪಿಸುವ ಅಗತ್ಯವಿದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕೂಡಲೇ ಕ್ರಮ ವಹಿಸಬೇಕು' ಎಂದು ಒತ್ತಾಯಿಸಿದರು.
‘ಕೋರ್ಟ್ ಆದೇಶಗಳ ನೆಪದಲ್ಲಿ ಅರಣ್ಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ 3 ಎಕರೆವರೆಗೂ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಸಕ್ರಮಗೊಳಿಸುವ ಅವಕಾಶವಿದೆ. ಆದರೆ, ಇದನ್ನು ಭೂಕಬಳಿಕೆ ಎಂದು ಪರಿಗಣಿಸುವುದು ಸರಿಯಲ್ಲ. ಕಂದಾಯ ಕಾಯ್ದೆ 192ಎ ಗೆ ತಿದ್ದುಪಡಿ ಅಗತ್ಯವಿದೆ' ಎಂದು ಸದಸ್ಯರು ಕೋರಿದರು.







