ಅನಗತ್ಯ ಖರ್ಚುಗಳನ್ನು ಮುಂದುವರಿಸಿದರೆ ಕಷ್ಟ ದಿನಗಳನ್ನು ನೋಡಬೇಕಾಗುತ್ತದೆ: ಸಿದ್ದರಾಮಯ್ಯ
‘'ಅಹಿಂದ, ಮಹಿಳೆಯರ ಕಲ್ಯಾಣಕ್ಕೆ ಬಜೆಟ್‍ನಲ್ಲಿ ಒತ್ತು ನೀಡಿಲ್ಲ’'

ಬೆಂಗಳೂರು, ಮಾ.8: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಈ ಬಜೆಟ್ ಅತ್ಯಂತ ನಿರಾಶಾದಾಯಕ ಬಜೆಟ್. ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ, ಬಡವರಿಗೆ ನಮ್ಮ ಸರಕಾರ 2018ರ ಬಜೆಟ್‍ನಲ್ಲಿ ನೀಡಿದಷ್ಟೂ ಹಣವನ್ನು ನೀಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ವಿಧಾನಸಭೆಯಲ್ಲಿ ಭೋಜನಾವಿರಾಮದ ಬಳಿಕ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತು ಮುಂದುವರೆಸಿದ ಅವರು, ಈ ಸರಕಾರಕ್ಕೆ ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ. ಮುಂದಿನ ಐದು ವರ್ಷದವರೆಗೆ ರಾಜಸ್ವ ಕೊರತೆಯ ಬಜೆಟ್‍ನ ಅಂದಾಜು ಮಾಡಿರುವುದರಿಂದ ತಕ್ಷಣದಿಂದಲೇ ವಿತ್ತೀಯ ಹೊಣೆಗಾರಿಕೆ ನೀತಿಯಲ್ಲಿರುವಂತೆ ಆರ್ಥಿಕ ಶಿಸ್ತಿನ ಮಾನದಂಡಗಳನ್ನು ಪಾಲನೆ ಮಾಡಬೇಕು ಎಂದರು.
ಸರಕಾರ ತೆರಿಗೆಯೇತರ ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು ಹಾಗೂ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ನಮ್ಮ ಪಾಲಿನ ತೆರಿಗೆ ಹಣ ಮತ್ತು ಅನುದಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಅನಗತ್ಯ ಹುದ್ದೆ ಮತ್ತು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕು. ಈ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಅನಗತ್ಯ ಖರ್ಚುಗಳನ್ನು ಮುಂದುವರೆಸಿದರೆ ರಾಜ್ಯ ಇನ್ನಷ್ಟು ಕಷ್ಟದ ದಿನಗಳನ್ನು ನೋಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
ರಾಜ್ಯ ಸರಕಾರ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಖಾಯಂ ಅಲ್ಲದ ನೌಕರರ ಗೌರವಧನವನ್ನು ಏರಿಸಿದೆ. ಬಡ ಶ್ರಮಿಕ ವರ್ಗದ ಜನರ ಗೌರವಧನ ಏರಿಸಿರುವ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅಂಗನವಾಡಿ ಕಾರ್ಯಕರ್ತೆಯರಿಗೆ 2013 ರವರೆಗೆ ಗೌರವಧನ ಹೆಚ್ಚಾದದ್ದು ಒಟ್ಟು 750 ರೂಪಾಯಿ ಮಾತ್ರ, ನಾನು ಮುಖ್ಯಮಂತ್ರಿ ಆದಮೇಲೆ ಅವರ ಗೌರವಧನವನ್ನು 5,000 ದಿಂದ 8,000ಕ್ಕೆ ಹೆಚ್ಚಿಸಿದೆ. ಅಂಗನವಾಡಿ ಸಹಾಯಕಿಯರಿಗೆ 2013 ರವರೆಗೆ ಗೌರವಧನ ಹೆಚ್ಚಾದದ್ದು 375 ರೂ.ಮಾತ್ರ, ನಾನು ಮುಖ್ಯಮಂತ್ರಿ ಆದ ಮೇಲೆ ಅವರ ಗೌರವ ಧನವನ್ನು 2,500 ರಿಂದ 4,000 ಕ್ಕೆ ಏರಿಸಿದೆ ಎಂದು ಅವರು ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ಮತ್ತು ಅಕ್ಷರ ದಾಸೋಹ ಕಾರ್ಯಕರ್ತೆಯರ ಗೌರವ ಧನವನ್ನು ಸರಕಾರ 1,000 ಹೆಚ್ಚು ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಕೆಗೆ ಸರಕಾರ ನಿಬಂಧನೆ ವಿಧಿಸಿದ್ದು 20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ 1,500 ಹಾಗೂ 10 ವರ್ಷ ಮೇಲ್ಪಟ್ಟು 20 ವರ್ಷಗಳ ಒಳಗೆ ಸೇವೆ ಸಲ್ಲಿಸಿರುವವರಿಗೆ 1,250 ಮತ್ತು ಹತ್ತು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ ಒಂದು ಸಾವಿರ ರೂಪಾಯಿ ಹೆಚ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಮ ಸಹಾಯಕರಿಗೆ ನಮ್ಮ ಅವಧಿಯಲ್ಲಿ ಗೌರವ ಧನವನ್ನು 7,000 ದಿಂದ 10,000ಕ್ಕೆ ಏರಿಸಿದ್ದೆವು. ಪೌರ ಕಾರ್ಮಿಕರ ಕೂಲಿಯನ್ನು ಸರಕಾರ ಒಂದು ಸಾವಿರ ರೂಪಾಯಿ ಹೆಚ್ಚಿಸಿದೆ, ನಮ್ಮ ಸರಕಾರ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನಿಷ್ಠ ಕೂಲಿ ಕಾಯ್ದೆ ಪ್ರಕಾರ ಅವರ ಕೂಲಿಯನ್ನು 7,700 ರಿಂದ 17,000ಕ್ಕೆ ಹೆಚ್ಚಿಸಿತ್ತು ಮತ್ತು 11,000 ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಅವರಿಗೆ 25,000 ವೇತನ ಸಿಗುವಂತೆ ಮಾಡಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
2013ರ ಡಿಸೆಂಬರ್‍ನ ಅಧಿವೇಶನದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಕಾಯ್ದೆಯನ್ನುಅನುಮೋದಿಸಿ, ಜಾರಿ ಮಾಡಿದ್ದು ನಮ್ಮ ಸರಕಾರ. ಐದು ವರ್ಷಗಳಲ್ಲಿ ನಾವು ಈ ಎಸ್.ಸಿ.ಪಿ/ಟಿ.ಎಸ್.ಪಿ ಯಡಿಯಲ್ಲಿ ಖರ್ಚು ಮಾಡಿದ ಹಣ 88,000 ಕೋಟಿ ರೂ.ಗಳು. ನಮ್ಮ ಸರಕಾರದ ಕೊನೆ ಬಜೆಟ್‍ನಲ್ಲಿ ಈ ಯೋಜನೆಗೆ ಮೀಸಲಿಟ್ಟಿದ್ದ ಹಣ 29,695 ಕೋಟಿ ರೂ.ಗಳು. ಆಗ ನಮ್ಮ ಬಜೆಟ್ ಗಾತ್ರ 2.02 ಲಕ್ಷ ಕೋಟಿ. ಈ ವರ್ಷದ ಬಜೆಟ್ ಗಾತ್ರ 2.65 ಲಕ್ಷ ಕೋಟಿಗೆ ಹೆಚ್ಚಾಗಿದ್ದರೂ ಈ ಯೋಜನೆಗೆ ಇಟ್ಟಿರುವ ಹಣ 28,000 ಕೋಟಿ ರೂ.ಮಾತ್ರ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ಮೀಸಲಿಡುವ ಅನುದಾನ ಕೂಡ ಹೆಚ್ಚಾಗಬೇಕಿತ್ತು, ಆ ಪ್ರಕಾರ ಪ್ರಸ್ತುತ ಬಜೆಟ್‍ನಲ್ಲಿ ಕನಿಷ್ಠ 42,000 ಕೋಟಿಯನ್ನಾದರೂ ಇಡಬೇಕಿತ್ತು. ದುರ್ಬಲ ವರ್ಗದವರ ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿಗೆ ಶೋಷಿತರ ಬಗ್ಗೆ ಇರುವ ಇಚ್ಛಾಶಕ್ತಿ ಏನೆಂದು ಇದರಲ್ಲೇ ಗೊತ್ತಾಗುತ್ತಿದೆ ಎಂದು ಅವರು ಟೀಕಿಸಿದರು.
ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಸರಕಾರದ ಗುತ್ತಿಗೆ ಕಾಮಗಾರಿಗಳಲ್ಲಿ 50 ಲಕ್ಷ ರೂಪಾಯಿ ವರೆಗೆ ಮೀಸಲಾತಿ ನೀಡುವಂತೆ 2017 ರಲ್ಲಿ ನಿಯಮ ರೂಪಿಸಿದ್ದೆವು. ನಂತರ 2018 ರ ಬಜೆಟ್‍ನಲ್ಲಿ ಅದನ್ನು 1 ಕೋಟಿ ರೂ.ಗೆ ಹೆಚ್ಚಿಸುವ ಘೋಷಣೆ ಮಾಡಿದ್ದೆವು, ಆದರೆ ಇವತ್ತಿನ ವರೆಗೆ ಈ ಬಗ್ಗೆ ಸರಕಾರ ಆದೇಶ ಹೊರಡಿಸಿಲ್ಲ. ತಾಂಡಗಳು, ಹಟ್ಟಿಗಳು, ಮಜರೆಗಳಲ್ಲಿ ವಾಸ ಮಾಡುವ ಜನರಿಗೆ ವಾಸಿಸುವವನೆ ಮನೆಯೊಡೆಯ ಎಂಬ ಕಾಯ್ದೆ ಜಾರಿಗೆ ತಂದು ಅವುಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಕೆಲಸವನ್ನು ನಮ್ಮ ಸರಕಾರ ಆರಂಭಿಸಿತ್ತು, ಇಂದು ಅವೆಲ್ಲಾ ನಿಂತುಹೋಗಿವೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳಿಗಾಗಿ ನಮ್ಮ ಸರಕಾರದ ಕಡೆಯ ಬಜೆಟ್‍ನಲ್ಲಿ 3,000 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದ್ದೆ, ಈ ಬಾರಿಯ ಬಜೆಟ್‍ನಲ್ಲಿ ಅದು 1,400 ಕೋಟಿ ರೂ.ಗೆ ಇಳಿದಿದೆ. ಕಳೆದ ಬಾರಿ ಬಿಡುಗಡೆಯಾದದ್ದು ಕೇವಲ 900 ಕೋಟಿ ರೂ. ಮಾತ್ರ. ಇಂದು ರಾಜ್ಯದಲ್ಲಿ 875 ವಸತಿ ಶಾಲೆಗಳಿವೆ, ಅವುಗಳಲ್ಲಿ 250 ಕ್ಕೂ ಅಧಿಕ ವಸತಿ ಶಾಲೆಗಳನ್ನು ಆರಂಭಿಸಿದ್ದು ನಮ್ಮ ಸರಕಾರ. ಡಿಎಸ್‍ಎಸ್‍ನವರು ನಮಗೆ ಹೆಂಡದಂಗಡಿಗಳು ಬೇಡ, ವಸತಿ ಶಾಲೆಗಳು ಬೇಕು ಎಂದು ಘೋಷಣೆ ಹಾಕುತ್ತಿದ್ದರು. ಅವರ ಘೋಷಣೆಯಿಂದಾಗಿ 1993 ರಿಂದ ವಸತಿ ಶಾಲೆಗಳು ಆರಂಭಗೊಂಡವು ಎಂದು ಅವರು ಹೇಳಿದರು.
ವಿದ್ಯಾಸಿರಿ ಯೋಜನೆಯಡಿ ಹಾಸ್ಟೆಲ್ ಸೀಟು ವಂಚಿತ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ. 1,500 ದಂತೆ ವಾರ್ಷಿಕ 15,000 ರೂಪಾಯಿ ನೀಡುವ ಕಾರ್ಯಕ್ರಮ ಜಾರಿಮಾಡಿದ್ದು ನಮ್ಮ ಸರ್ಕಾರ. ಈಗ ವಿದ್ಯಾಸಿರಿ ಇಲ್ಲ, ವಿದ್ಯಾರ್ಥಿ ವೇತನ ಇಲ್ಲ, ಹೀಗಾದರೆ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಿದ್ಯಾವಂತರಾಗುವುದು ಹೇಗೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯದ ಒಟ್ಟು 4 ಕೋಟಿ 34 ಲಕ್ಷ ಜನರಿಗೆ ತಿಂಗಳಿಗೆ ತಲಾ ಏಳು ಕೆ.ಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ನೀಡುತ್ತಿದ್ದೆವು. ಅದನ್ನು ಬಿಜೆಪಿ ಸರಕಾರ ಐದು ಕೆ.ಜಿಗೆ ಇಳಿಸಿತು, ರಾಜ್ಯಪಾಲರ ಭಾಷಣದಲ್ಲಿ ಒಂದು ಕೆ.ಜಿ ಜಾಸ್ತಿ ಮಾಡುವುದಾಗಿ ಹೇಳಿಸಿದ್ದರು, ಬಜೆಟ್ ಪುಸ್ತಕದಲ್ಲಿ ಒಂದು ಕೆ.ಜಿ ಜೋಳ ಅಥವಾ ರಾಗಿ ಕೊಡುವುದಾಗಿ ಹೇಳಿದ್ದಾರೆ. ಬಜೆಟ್‍ನಲ್ಲಿ ಆಲಂಕಾರಿಕ ಪದಗಳನ್ನು ಬಳಸಿ ಬಡವರ ಬಗ್ಗೆ ಮಾತನಾಡಿದ್ದು ಬಿಟ್ಟರೆ ಬಡವರಿಗಾಗಿ ಸರಕಾರ ಮಾಡಿರುವುದು ಏನಿಲ್ಲ ಎಂದು ಅವರು ದೂರಿದರು.
ಕೃಷ್ಣ ಮೇಲ್ದಂಡೆ 3ನೇ ಹಂತದ ಕಾಮಗಾರಿಗೆ 5,000 ಕೋಟಿ, ಮೇಕೆದಾಟು ಯೋಜನೆಗೆ 1,000 ಕೋಟಿ, ಮಹದಾಯಿ ಯೋಜನೆಗೆ 1,000 ಕೋಟಿ, ತುಂಗ ಭದ್ರಾ ಕಾಲುವೆಗೆ 1,000 ಕೋಟಿ ಇಟ್ಟಿದ್ದಾರೆ. ಮೇಕೆದಾಟು ಯೋಜನೆ ಜಾರಿಯಾಗಬೇಕೆಂದು ನಾವು ಪಾದಯಾತ್ರೆ ಮಾಡಿದೆವು, ಈಗ ಯೋಜನೆ ಜಾರಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದೆ, ಅದರ ಪ್ರಕಾರ ತಮಿಳುನಾಡಿಗೆ 177.75 ಟಿ.ಎಂ.ಸಿ ನೀರನ್ನು ಒಂದು ಸಾಮಾನ್ಯ ವರ್ಷದಲ್ಲಿ ಬಿಡಬೇಕು. ಮೇಕೆದಾಟು ಯೋಜನೆ ಜಾರಿಯಾಗದಂತೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ಸಂವಿಧಾನಾತ್ಮಕ ಹಕ್ಕುಗಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಒಂದು ಸಾಮಾನ್ಯ ವರ್ಷದಲ್ಲಿ ಬಿಡುವ ಅವರ ಪಾಲಿನ ನೀರನ್ನು ಹೊರತುಪಡಿಸಿ ಕಳೆದ ಏಳು ವರ್ಷಗಳಲ್ಲಿ 582 ಟಿ.ಎಂ.ಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಇದು ನಮಗಾದ ನಷ್ಟವಲ್ಲದೆ ಇನ್ನೇನು. ತಮಿಳುನಾಡಿನ ಸರಕಾರ ರಾಜಕೀಯ ಕಾರಣಕ್ಕೆ ಸುಪ್ರೀಂ ಕೋರ್ಟ್‍ನಲ್ಲಿ ಮೊಕದ್ದಮೆ ದಾಖಲಿಸಿದೆ, ಆದರೆ ಸುಪ್ರೀಂ ಕೋರ್ಟ್ ಈವರೆಗೆ ಯಾವುದೇ ರೀತಿಯ ತಡೆಯಾಜ್ಞೆ ನೀಡಿಲ್ಲ ಎಂದು ಅವರು ಹೇಳಿದರು.
ಮೇಕೆದಾಟು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವಿವಾದಾತ್ಮಕ ವಿಚಾರ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವರು ಹೇಳಿಕೆ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾಗಲಿ ಅಥವಾ ನೀರಾವರಿ ಸಚಿವರಾಗಲಿ ತಕ್ಷಣ ಅವರ ಹೇಳಿಕೆಯನ್ನು ಖಂಡಿಸಬೇಕಿತ್ತು. ರಾಜ್ಯ ಸರಕಾರ ಸುಮ್ಮನಿರುವುದರಿಂದ ಇದು ವಿವಾದಾತ್ಮಕ ವಿಷಯ ಎಂದು ಪರಿಗಣಿಸಿ ನಾಳೆ ಪರಿಸರ ಅನುಮತಿಯನ್ನು ಕೇಂದ್ರ ಸರಕಾರ ನೀಡಲ್ಲ. ಆಗೇನು ಮಾಡಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕಾವೇರಿ ನೀರು ಪ್ರಾಧಿಕಾರದಲ್ಲಿ ಮೇಕೆದಾಟು ವಿಚಾರ ಚರ್ಚೆಗೆ ಎತ್ತಿಕೊಳ್ಳದೆ ಮುಂದೂಡಲಾಗುತ್ತಿದೆ, ಕೇಂದ್ರ ಸರಕಾರ ಪರಿಸರ ಅನುಮತಿ ನೀಡುತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಡಬ್ಬಲ್ ಇಂಜಿನ್ ಸರಕಾರವಿದೆ. ತಕ್ಷಣ ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬರಲಿ. ಇದನ್ನು ಮಾಡದೆ ಯೋಜನೆಗೆ ಬಜೆಟ್‍ನಲ್ಲಿ ಹಣ ಇಟ್ಟರೆ ಅದು ಬರೀ ರಾಜಕೀಯ ಕಾರಣಕ್ಕಾಗಿ ಇಟ್ಟಂತಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.
ಹೆಚ್ಚಿನ ಸಂಖ್ಯೆಯ ಹುದ್ದೆಗಳು ಸೃಜಿಸಲಾಗುತ್ತಿರುವ ಕುರಿತು ನಾನು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿದಾಗ, ಸರ್ ನೀವು ರಾಜಕೀಯ ಉದ್ದೇಶಗಳಿಗಾಗಿ ನಿಗಮ, ಮಂಡಳಿಗಳನ್ನು ರಚನೆ ಮಾಡಿ ನಿಮಗೆ ಬೇಕಾದವರಿಗೆ ಪುನರ್ ವಸತಿ ಕಲ್ಪಿಸಿಕೊಡುತ್ತೀರಲ್ಲ. ಹಾಗೆಯೇ ನಾವು ಕೂಡ ನಮಗೆ ಬೇಕಾದವರಿಗಾಗಿ ಹುದ್ದೆಗಳನ್ನು ಸೃಜಿಸುತ್ತೇವೆ ಎಂದು ಹೇಳಿದ್ದರು.
-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್







