ಮೇಕೆದಾಟು ವಿಚಾರದಲ್ಲಿ ಒಂದು ವಾರದಲ್ಲಿ ಸರ್ವಪಕ್ಷ ಸಭೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ.8: ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾನೂನು ತಜ್ಞರು ಒಳಗೊಂಡಂತೆ ಸರ್ವಪಕ್ಷಗಳ ಮುಖಂಡರ ಸಭೆಯನ್ನು ಒಂದು ವಾರದಲ್ಲಿ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಜಲಶಕ್ತಿ ಸಚಿವರು ಮೇಕೆದಾಟು ಯೋಜನೆಯನ್ನು ವಿವಾದಾತ್ಮಕ ವಿಚಾರ ಎಂದು ಹೇಳಿದರು. ಆಗ ಸಭೆಯಲ್ಲಿದ್ದ ಮುಖ್ಯಮಂತ್ರಿ ಹಾಗೂ ಸಚಿವರು ಯಾಕೆ ವಿರೋಧಿಸಲಿಲ್ಲ ಎಂದು ಟೀಕಿಸಿದಕ್ಕೆ ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.
ಕೇಂದ್ರ ಜಲಶಕ್ತಿ ಸಚಿವರು ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ದಕ್ಷಿಣ ಭಾರತದ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಇಲ್ಲಿಗೆ ಬಂದಿದ್ದರು. ಆ ಸಭೆಯಲ್ಲಿ ನಾನೂ ಇದ್ದೆ. ಆದರೆ, ನಾನು ಅಲ್ಲಿ ಇರುವವರೆಗೆ ಕಾವೇರಿ ನದಿ ಅಥವಾ ಮೇಕೆದಾಟು ವಿಚಾರ ಪ್ರಸ್ತಾಪ ಆಗಲೇ ಇಲ್ಲ. ಕೇಂದ್ರ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಈ ಮಾತನ್ನು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆ ಕುರಿತು ಪರಿಸರ ಇಲಾಖೆಯ ಅನುಮತಿ ಹಾಗೂ ಡಿಪಿಆರ್ ಅನುಮೋದನೆ ಪಡೆಯುವುದು ಬಾಕಿಯಿದೆ. ಆದಷ್ಟು ಬೇಗ ಇವುಗಳಿಗೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಕಾನೂನು ಇಲಾಖೆಯ ಜೊತೆಯೂ ಚರ್ಚೆ ಮಾಡುತ್ತೇನೆ. ಅಲ್ಲದೆ, ಸರ್ವ ಪಕ್ಷಗಳ ಮುಖಂಡರ ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಮ್ಮ ನಿಲುವು ಅಚಲವಾಗಿದೆ. ಈಗಾಗಲೆ ಕೇಂದ್ರ ಸರಕಾರಕ್ಕೆ ಮೂರು ಬಾರಿ ಪತ್ರ ಬರೆದಿದ್ದೇನೆ. ಆದಷ್ಟು ಬೇಗ ಮೇಕೆದಾಟು ಯೋಜನೆ ಆರಂಭ ಮಾಡಬೇಕು ಅನ್ನೋದು ನಮ್ಮ ಬದ್ಧತೆಯೂ ಆಗಿದೆ. ರಾಜ್ಯದ ಹಿತಾಸಕ್ತಿಯನ್ನು ಯಾವುದೆ ಕಾರಣಕ್ಕೂ ಬಲಿಕೊಡುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.







