ಹಿಜಾಬ್ ವಿವಾದ ಸೃಷ್ಟಿಸಿ ಹೆಣ್ಣುಮಕ್ಕಳ ಶಿಕ್ಷಣ ಮೊಟಕುಗೊಳಿಸುವ ಷಡ್ಯಂತ್ರ; ಎನ್ ಡಬ್ಲ್ಯೂಎಫ್ ರಾಜ್ಯಾಧ್ಯಕ್ಷೆ ಫರ್ಝಾನಾ

ಬೆಂಗಳೂರು, ಮಾ.8: ಶಿಕ್ಷಣದಲ್ಲಿ ಮುಸಲ್ಮಾನ ಹೆಣ್ಣುಮಕ್ಕಳ ಸಾಧನೆ ಶತ್ರುಗಳ ಕಣ್ಣು ಕುಕ್ಕುವಂತೆ ಮಾಡಿದೆ. ಹಾಗಾಗಿ ಹಿಜಾಬ್ ವಿವಾದವನ್ನು ಸೃಷ್ಟಿಸಿ, ಶಿಕ್ಷಣವನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ನ್ಯಾಷನಲ್ ವುಮೆನ್ಸ್ ಫ್ರಂಟ್‍ನ ರಾಜ್ಯಾಧ್ಯಕ್ಷೆ ಫರ್ಝಾನಾ ಕಿಡಿಕಾರಿದ್ದಾರೆ.
ಮಂಗಳವಾರ ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ಅಂತರ್‍ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಆಯೋಜಿಸಿದ್ದ ‘ಮಹಿಳಾ ರಕ್ಷಣೆಯು ಕೇವಲ ಘೋಷಣೆಯಲ್ಲ; ಇದು ಘನತೆಯ ಹಕ್ಕು’ ಎಂಬ ಸಂವಾದದಲ್ಲಿ ಮಾತನಾಡಿದ ಅವರು, ಸಂಘಪರಿವಾರದವರು ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶತ್ರುಗಳು ಮಾತ್ರ ಆಗಿರದೆ, ಎಲ್ಲ ಹೆಣ್ಣುಮಕ್ಕಳ ಶತ್ರುಗಳಾಗಿದ್ದಾರೆ ಎಂದು ಪ್ರಸ್ತುತ ದಿನಗಳಲ್ಲಿ ಅರ್ಥ ಮಾಡಿಕೊಳ್ಳಬೇಕು. ನರಮೇಧವನ್ನು ಮಾಡಿದ ಆರ್‍ಎಸ್‍ಎಸ್ ಸಂಘಟನೆಯು ಶಕುನಿಯ ಸಂತತಿಗಳಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಾಲ್ಕು ಗೋಡೆಗಳ ಮಧ್ಯೆಯಿದ್ದ ಮಹಿಳೆಯರನ್ನು ಬೀದಿಗಿಳಿಸಿ ಹೋರಾಟ ಮಾಡುವಂತೆ ಮಾಡಿದ್ದಾರೆ. ದೆಹಲಿ ಆಡಳಿತ ಕುರ್ಚಿಗಳು ಅಲುಗಾಡಿಸುವಂತೆ ಮಾಡಿದ್ದಾರೆ. ದೇಶದಲ್ಲಿ ಮಹಿಳಾ ಆಂದೋಲನಗಳು ಹೆಚ್ಚಾಗುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಸಾಮಾಜಿಕ ಹೋರಾಟಗಾರ್ತಿ ನಿಶಿತಾ ಮಾತನಾಡಿ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ನಾಣ್ಣುಡಿ ಇಂದು ನಿಜವಾಗಿದೆ. ಹೆಣ್ಣುಮಕ್ಕಳ ರಕ್ಷಣೆ ಘೋಷವಾಕ್ಯದಡಿ ಹೆಣ್ಣುಮಕ್ಕಳ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ, ಶಿಕ್ಷಣ ಅಗತ್ಯವಾಗಿ ಬೇಕಾಗಿದೆ. ಆದರೆ, ಇಂದು ಶೈಕ್ಷಣಿಕ ಸಂಸ್ಥೆಗಳಲ್ಲಿ ಅಮಾನವೀಯ ಘಟನೆಗಳು ನಡೆಯುತ್ತಿರುವುದು ನಮ್ಮ ದೌರ್ಭಾಗ್ಯವಾಗಿದೆ ಎಂದರು.
ನಮ್ಮ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಸಹದ್ಯೋಗಿಗಳಿಂದ ಲೈಂಗಿಕ ಶೋಷಣೆ ನಡೆದಿರುವುದು ಮಿಟೂ ಅಭಿಯಾನದಲ್ಲಿ ಬಹಿರಂಗವಾಗಿದೆ ಎಂದು ನೆನಪಿಸಿಕೊಂಡ ಅವರು, ಇಂದಿಗೂ ದಲಿತ, ಅಲ್ಪಸಂಖ್ಯಾತ ಸೇರಿದಂತೆ ಗ್ರಾಮೀಣ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಪತ್ರಕರ್ತೆ ರುಶ್ದಾ ಖಾನ್ ಮಾತನಾಡಿ, ಹಿಜಾಬ್ ವಿವಾದದಿಂದ ಕಾಲೇಜು ಆಡಳಿತ ಮಂಡಳಿ, ತರಗತಿಯ ಸಹಪಾಠಿಗಳು ಸೇರಿದಂತೆ ಮಾಧ್ಯಮಗಳಿಂದ ಅವಮಾನವಾಗಿದೆ. ಬಿಜೆಪಿ ಅಧಿಕೃತ ಟ್ವಿಟರ್‍ನಲ್ಲಿ ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಸುರಕ್ಷತೆಗೆ ಧಕ್ಕೆಯಾಗುವಂತಹ ಸಂದೇಶ ಹಾಕಲಾಗಿದೆ. ಕಳೆದ ಎರಡು ವರ್ಷಗಳ ಕೋವಿಡ್ ಸೋಂಕಿನ ಉಪಟಳದಿಂದಾಗಿ ಕಿರುಕುಳ ಎಂಬುದು ಡಿಜಿಟಲ್‍ಗೆ ರೂಪಾಂತರವಾಗಿದೆ.ಅಲ್ಲದೆ, ಅದು ಹೆಚ್ಚು ಪ್ರಚಲಿತವಾಗುತ್ತಿದೆ. ಮುಸ್ಲಿಂ ಹೆಣ್ಣುಮಕ್ಕಳನ್ನು ಅಮಾನವೀಯವಾಗಿ ನೋಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾನೂನಿನಲ್ಲಿ ಬಿಜೆಪಿ ರಾಜಕೀಯಪ್ರೇರಿತ ಅಜೆಂಡಾಗಳನ್ನು ಜಾರಿಗೊಳಿಸಲಾಗುತ್ತಿದೆ. ಹಾಗಾಗಿ ಪ್ರತಿದಿನ ಹೋರಾಟ ಮಾಡುತ್ತಿರುವ ಇಂತಹ ಸಂದರ್ಭದಲ್ಲಿ ಸಂಘಟಿತರಾಗಿ ಸಮುದಾಯದ ಸಂರಕ್ಷಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಂವಾದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್‍ನ ಲುಬ್ನಾ ಸಿರಾಜ್, ನೌಶಿರಾ, ಬೇಬಿ ಆಯೇಷಾ ಮತ್ತಿತರರು ಉಪಸ್ಥಿತರಿದ್ದರು.
ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶ ಹೊರ ಬಂದಾಗ ಆದೇಶವನ್ನು ದುರ್ಬಳಕೆ ಮಾಡಿಕೊಂಡ ಆಡಳಿತ ಮಂಡಳಿಗಳು ಮತ್ತು ಮಾಧ್ಯಮಗಳು ಹೆಣ್ಣುಮಕ್ಕಳನ್ನು ಒಳಗೊಂಡಂತೆ ಮಹಿಳೆಯರನ್ನು ಅವಮಾನಗೊಳಿಸಿದವು. ಮಹಿಳೆಯರು ಅವಮಾನಗೊಂಡಿರುವುದನ್ನು ಮಾರೆಮಾಚಿದವು. ಹಿಜಾಬ್ ಧರಿಸಿದ ಕಾರಣ ಪರೀಕ್ಷೆಗಳನ್ನು ನಿರಾಕರಿಸಿದ ಹೆಣ್ಣುಮಕ್ಕಳ ಅಂಕಿ-ಅಂಶಗಳು ಪ್ರಕಟಿಸಬೇಕಾಗಿದೆ.
-ರಿಶ್ದಾ ಖಾನ್, ಪತ್ರಕರ್ತೆ







