ಮುನ್ನೂರು, ಅಂಬ್ಲಮೊಗರು, ಬೆಳ್ಮ ಗ್ರಾಮಗಳಲ್ಲಿ ಕೃಷಿ ಭೂಮಿ ಖರೀದಿ ಮಾಫಿಯಾ: ಕೃಷಿ ಭೂಮಿ ಸಂರಕ್ಷಣಾ ಸಮಿತಿ ಆರೋಪ
ಮಂಗಳೂರು, ಮಾ.8: ಉಳ್ಳಾಲ ತಾಲೂಕು ವ್ಯಾಪ್ತಿಯ ಮುನ್ನೂರು, ಅಂಬ್ಲಮೊಗರು, ಬೆಳ್ಮ ಗ್ರಾಮಗಳ ಹಲವಾರು ಎಕರೆ ಕೃಷಿ ಜಮೀನನ್ನು ಭೂ ಮಾಫಿಯಾ ಕಡಿಮೆ ಬೆಲೆಗೆ ಖರೀದಿಸುತ್ತಿದ್ದು, ಇದೊಂದು ಬೃಹತ್ ಭೂ ಮಾಫಿಯಾ ಆಗಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನಿಯೋಗವು ಮೂರು ಗ್ರಾಮಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದೆ.
ಇಂದು ಕೃಷಿಕರು ತೀವ್ರ ಆತಂಕಗೊಂಡಿದ್ದಾರೆ. ಕೃಷಿ ಚಟುವಟಿಕೆಗೂ ಸಮಸ್ಯೆ ಎದುರಾಗಿದೆ. ಯಾವುದೋ ಖಾಸಗಿ ಸಂಸ್ಥೆಯೊಂದು ಹಡಿಲು ಬಿದ್ದ ಕೃಷಿ ಭೂ ಪ್ರದೇಶವನ್ನು ಮಧ್ಯವರ್ತಿಗಳ ಮುಖಾಂತರ ಕಡಿಮೆ ಬೆಲೆಗೆ ಖರೀದಿಯಲ್ಲಿ ತೊಡಗಿಕೊಂಡಿದೆ. ಖರೀದಿಸಿದ ಜಮೀನನ್ನು ಮಣ್ಣು ತುಂಬಿಸಿ ಸಮದಟ್ಟುಗೊಳಿಸುವ ಕಾರ್ಯವೂ ಭರದಿಂದ ಸಾಗಿದೆ. ಈಗಾಗಲೇ ಕೃಷಿನಿರತ ರೈತರ ಬೆಳೆಗೆ ಅನೇಕ ತೊಂದರೆಯನ್ನುಂಟು ಮಾಡುತ್ತಿದೆ ಎಂದು ನಿಯೋಗವು ಗ್ರಾಪಂಗಳ ಆಡಳಿತ ವರ್ಗಕ್ಕೆ ತಿಳಿಸಿವೆ.
ಒಂದೆಡೆ ಕಲುಷಿತ ನೀರಿದ್ದ ನಾಲೆಗಳು ಸಂಪೂರ್ಣ ಮುಚ್ಚಿದೆ. ಕೃಷಿ ಪ್ರದೇಶವನ್ನು ನೀರು ಆವರಿಸಿದೆ. ನೀರು ಶೇಖರಣೆಯಾಗಿ ಕೃಷಿಗೆ ಹಾನಿಯಾಗಿದೆ. ಕೃಷಿಗೆ ನೀರುಣಿಸಲು ಪೂರಕವಾಗಿದ್ದ ರಾಜಕಾಲುವೆಯು ಸಂಪೂರ್ಣ ಹದಗೆಟ್ಟು ಹೋಗಿದೆ. ಇದನ್ನು ಯಾರು, ಯಾತಕ್ಕಾಗಿ ಖರೀದಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ ಎಂದು ಸಮಿತಿಯ ಸಂಚಾಲಕ ಜಯಂತ ಅಂಬ್ಲಮೊಗರು, ಸಹ ಸಂಚಾಲಕರಾದ ವಸಂತ ಬಡಕಬೈಲು, ಶೇಖರ್ ಕುಂದರ್ ಅಭಿಪ್ರಾಯಪಟ್ಟಿದ್ದಾರೆ.