ಗ್ರಾಪಂ ಸದಸ್ಯರ ಗೌರವಧನ ಹೆಚ್ಚಿಸಲು ಶಾಸಕ ಮಂಜುನಾಥ ಭಂಡಾರಿ ಆಗ್ರಹ
ಮಂಗಳೂರು, ಮಾ.8: ರಾಜ್ಯದ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಂಗಳವಾರ ಅಧಿವೇಶನದಲ್ಲಿ ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಪಂಗಳೇ ತಳಹದಿಯಾಗಿದೆ. ಹಾಗಾಗಿ ಗ್ರಾಪಂ ವ್ಯವಸ್ಥೆಯನ್ನು ಬಲಿಷ್ಠವಾಗಿಸಿ ದರೆ ಮಾತ್ರ ಮಾಹಾತ್ಮ ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು. ಆದರೆ ಗ್ರಾಪಂ ಚುನಾವಣೆಯಲ್ಲಿ ಮೀಸಲಾತಿ ಪ್ರಕಾರ ಶೇ.50ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿ ಬರುವುದರಿಂದ ಗೌರವಾನ್ವಿತವಾಗಿ ಬದುಕಲು ಮತ್ತು ಬಡಜನರ ಕಷ್ಟ-ಸುಖಗಳಿಗೆ ಸ್ಪಂದಿಸಲು ಚುನಾಯಿತ ಪ್ರತಿನಿಧಿಗಳೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಠ ಮಾಸಿಕ 10 ಸಾವಿರ ರೂ.ಗೆ ಹೆಚ್ಚಿಸಬೇಕು. ಚುನಾಯಿತ ಪ್ರತಿನಿಧಿಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಆ ಜಿಲ್ಲೆಗಳಲ್ಲಿ ಓಡಾಡಲು ಉಚಿತ ಬಸ್ ಸೌಕರ್ಯ ಕಲ್ಪಿಸಬೇಕು. 5 ವರ್ಷ ಪೂರ್ಣಗೊಳಿಸಿದ ಚುನಾಯಿತ ಪ್ರತಿನಿಧಿಗಳಿಗೆ ಪಿಂಚಣಿ ನೀಡಬೇಕು ಎಂದು ಮಂಜುನಾಥ ಭಂಡಾರಿ ಒತ್ತಾಯಿಸಿದರು.





