ಹಿಜಾಬಿಗೆ ವಿರೋಧ; ಮಂಗಳೂರು ವಿವಿ ಕುಲಪತಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮನವಿ

ಮಂಗಳೂರು, ಮಾ.8: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಕೆಲವೊಂದು ಕಾಲೇಜುಗಳಲ್ಲಿ ಶಿರವಸ್ತ್ರ ನೆಪವನ್ನೊಡ್ಡಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ತಡೆಯೊಡ್ಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ. ಎಸ್.ಯಡಪಡಿತ್ತಾಯ ಅವರನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನಿಯೋಗ ಭೇಟಿ ಮಾಡಿ ಮಾತುಕತೆ ನಡೆಸಿತು.
ಹಿಜಾಬ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಶೀಘ್ರ ಹೊರಬರುವ ಸಾಧ್ಯತೆ ಇದೆ. ಈ ಮಧ್ಯೆ ಹಲವು ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದೆ. ಆದರೆ ಕೆಲವು ಕಾಲೇಜುಗಳಲ್ಲಿ ಶಿರವಸ್ತ್ರ ತೆಗೆದಿರಿಸಿ ಪರೀಕ್ಷೆ ಬರೆಯುವಂತೆ ಬಲವಂತಪಡಿಸಲಾಗುತ್ತಿದೆ ಮತ್ತು ಪರೀಕ್ಷೆ ಬರೆಯಲು ತಡೆಯೊಡ್ಡಲಾಗು ತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಈ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ನಿಯೋಗ ಮನವಿ ಸಲ್ಲಿಸಿತು.
ಈ ಸಂದರ್ಭ ಪರೀಕ್ಷಾಂಗ ಕುಲಸಚಿವ ಪಿ.ಎಲ್. ಧರ್ಮ ಅವರಿಗೂ ಮನವಿ ಸಲ್ಲಿಸಲಾಯಿತು. ಸಿಎಫ್‌ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾ ನಾಯಕ ರಿಯಾಝ್ ಅಂಕತ್ತಡ್ಕ, ಮಂಗಳೂರು ವಿವಿ ವಿದ್ಯಾರ್ಥಿ ನಾಯಕ ಅಶಾಮ್ ನಿಯೋಗದಲ್ಲಿದ್ದರು.