ಸುಮಿಯಿಂದ 694 ಭಾರತೀಯರು ನಿರ್ಗಮನ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಹೊಸದಿಲ್ಲಿ, ಮಾ. 8: ಉಕ್ರೇನ್ನ ಸುಮಿಯಲ್ಲಿ ಸಿಲುಕಿಕೊಂಡಿದ್ದ 694 ಭಾರತೀಯ ವಿದ್ಯಾರ್ಥಿಗಳು ಬಸ್ ಮೂಲಕ ಪೋಲ್ಟಾವಕ್ಕೆ ತೆರಳಿದ್ದಾರೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ‘‘ನಿನ್ನೆ ರಾತ್ರಿ ನಾನು ನಿಯಂತ್ರಣ ಕೊಠಡಿಯಲ್ಲಿ ಪರಿಶೀಲನೆ ನಡೆಸಿದೆ. ಆಗ 694 ಭಾರತೀಯ ವಿದ್ಯಾರ್ಥಿಗಳು ಸುಮಿಯಲ್ಲೇ ಇದ್ದರು. ಇಂದು ಅವರು ಬಸ್ ಮೂಲಕ ಪೋಲ್ಟಾವಕ್ಕೆ ನಿರ್ಗಮಿಸಿದ್ದಾರೆ’’ ಎಂದು ಪುರಿ ಮಾಹಿತಿ ನೀಡಿದ್ದಾರೆ.
ಬಸ್ ಆಗಮಿಸಿದೆ ಹಾಗೂ ವಿದ್ಯಾರ್ಥಿಗಳು ಬಸ್ ಹತ್ತಲು ಆರಂಭಿಸಿದ್ದಾರೆ ಎಂದು ಗುರುತು ಹೇಳಿಕೊಳ್ಳಲು ಇಚ್ಛಿಸದ ಸುಮಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯೊಬ್ಬ ದೃಢಪಡಿಸಿದ್ದಾನೆ. ‘‘ಪೋಲ್ಟಾವಗೆ ಹೋಗುತ್ತೇವೆ ಎಂದು ನಮಗೆ ತಿಳಿಸಲಾಗಿದೆ. ನಾವು ಸುರಕ್ಷಿತ ವಲಯಕ್ಕೆ ತಲುಪಬೇಕು ಎಂದು ಪ್ರಾರ್ಥಿಸುತ್ತೇನೆ ಹಾಗೂ ಈ ದುಃಖ ಕೊನೆಯಾಗಲಿದೆ’’ ಎಂದು ಅವರು ಹೇಳಿರುವುದಾಗಿ ಪಿಟಿಐ ಉಲ್ಲೇಖಿಸಿದೆ.
ರಶ್ಯ ಗಡಿಗೆ ಸಮೀಪ ಹಾಗೂ ಉಕ್ರೇನ್ನ ರಾಜಧಾನಿ ಕೀವ್ನಿಂದ ಸುಮಾರು 350 ಕಿ.ಮೀ. ಪೂರ್ವದಲ್ಲಿರುವ ಸುಮಿಯಲ್ಲಿ ರಶ್ಯ ಆಕ್ರಮಣ ಆರಂಭಿಸಿದ ಬಳಿಕ ತೀವ್ರ ಯುದ್ಧ ನಡೆಯುತ್ತಿದೆ. ಇಂದು ಈ ನಗರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಇಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿಗಳು ತೆರವಿಗಾಗಿ ಕಾಯುತ್ತಿದ್ದರು. ಕೊರೆಯುತ್ತಿರುವ ಚಳಿ, ಖಾಲಿಯಾಗುತ್ತಿರುವ ಆಹಾರ, ನೀರಿನಿಂದಾಗಿ ಇನ್ನಷ್ಟು ದಿನಗಳು ನಿಭಾಯಿಸಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದರು. 50 ಕಿ.ಮೀ. ದೂರದಲ್ಲಿರುವ ರಶ್ಯ ಗಡಿಗೆ ಅಪಾಯಕಾರಿ ಪ್ರಯಾಣ ಆರಂಭಿಸಲು ನಿರ್ಧರಿಸಿದ್ದೇವೆ ಎಂದು ವಿದ್ಯಾರ್ಥಿಗಳು ವೀಡಿಯೊ ಹಂಚಿಕೊಂಡಿದ್ದರು. ಆದರೆ, ಸರಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ಅವರನ್ನು ಸಂಪರ್ಕಿಸಿ ‘‘ಅನಗತ್ಯ ಅಪಾಯವನ್ನು ತಪ್ಪಿಸಿ’’ ಎಂದು ಸಲಹೆ ನೀಡಿತ್ತು.







