ಉಳ್ಳಾಲ ಗ್ರಾಮಾಂತರದಲ್ಲಿ ಹೊಸ ಪೊಲೀಸ್ ಠಾಣೆ ಮಂಜೂರಿಗೆ ಯು.ಟಿ.ಖಾದರ್ ಆಗ್ರಹ

ಬೆಂಗಳೂರು, ಮಾ. 8: ‘ಉಳ್ಳಾಲ ಗ್ರಾಮಾಂತರ(ಕುತ್ತಾರು) ಪೊಲೀಸ್ ಠಾಣೆಯನ್ನು ಸೃಜಿಸುವ ಪ್ರಸ್ತಾವನೆ ರಾಷ್ಟ್ರೀಯ ಪೊಲೀಸ್ ಆಯೋಗದ ಮಾನದಂಡಗಳನ್ನು ಪೂರೈಸದಿದ್ದರೂ ವಿಶೇಷ ಪ್ರಕರಣ ಎಂದು ಪರಿಗಣಿಸಿ ಅಲ್ಲಿಗೆ ಹೊಸ ಪೊಲೀಸ್ ಠಾಣೆಯನ್ನು ಮಂಜೂರು ಮಾಡಲು ಇಚ್ಛಾಶಕ್ತಿ ಪ್ರದರ್ಶಿಸಬೇಕು' ಎಂದು ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಇಂದಿಲ್ಲಿ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘2017ರಲ್ಲಿ ಹೊಸ ಪೊಲೀಸ್ ಠಾಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳ್ಳಾಲ ಧಾರ್ಮಿಕ ಶ್ರದ್ಧಾಕೇಂದ್ರವೂ ಆಗಿದ್ದು, ಈ ಪ್ರದೇಶದಲ್ಲಿ ಚರ್ಚ್, ದರ್ಗಾ ಹಾಗೂ ದೇವಸ್ಥಾನಗಳಿವೆ. ಅಲ್ಲದೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕೆಗಳು ಇಲ್ಲಿವೆ. ಹೀಗಾಗಿ ಪೊಲೀಸ್ ಠಾಣೇ ಅಗತ್ಯವಿದೆ' ಎಂದು ಪ್ರತಿಪಾದಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಈಗಾಗಲೇ ಉಳ್ಳಾಲ ಪೊಲೀಸ್ ಠಾಣೆ ಇದೆ. ರಾಷ್ಟ್ರೀಯ ಪೊಲೀಸ್ ಆಯೋಗದ ಮಾನದಂಡದ ಅನ್ವಯ ಆ ಪ್ರದೇಶದಲ್ಲಿ 50ರಿಂದ 60 ಸಾವಿರ ಜನಸಂಖ್ಯೆ ಇರಬೇಕು. ವಾರ್ಷಿಕ ಕನಿಷ್ಠ 300ರಷ್ಟು ಅಪರಾಧ ಪ್ರಕರಣಗಳು ದಾಖಲಾಗಬೇಕು. ಆದರೆ, ಉಳ್ಳಾಲ ಗ್ರಾಮಾಂತರ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. 2019ರಲ್ಲಿ 151, 2020ರಲ್ಲಿ 183, 2021ರಲ್ಲಿ 241 ಹಾಗೂ 2022ರಲ್ಲಿ ಈವರೆಗೂ 32 ಅಪರಾಧ ಕೃತ್ಯಗಳು ನಡೆದಿವೆ. ಹೀಗಾಗಿ ಮಾನದಂಡಗಳಡಿಯಲ್ಲಿ ಬರುವುದಿಲ್ಲ' ಎಂದರು.
ಈ ವೇಳೆ ಮಾತನಾಡಿದ ಯು.ಟಿ.ಖಾದರ್, ‘ಮಾನದಂಡಗಳಡಿಯಲ್ಲಿ ಬರುವುದಿಲ್ಲ, ಸರಿ. ಆದರೆ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೂಡಲೇ ಉಳ್ಳಾಲ ಗ್ರಾಮಾಂತರ ಪ್ರದೇಶದಲ್ಲಿ ಹೊಸದಾಗಿ ಪೊಲೀಸ್ ಠಾಣೆ ಮಂಜೂರು ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಜನರಿಗೆ ಅನುಕೂಲವಾಗಲಿದೆ' ಎಂದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.







