ಬಿಎಸ್ಪಿ ದೊಡ್ಡ ಶಕ್ತಿಯಾಗಿ ಮೂಡಿ ಬರಲಿದೆ: ಉತ್ತರಪ್ರದೇಶ ಚುನಾವಣೋತ್ತರ ಸಮೀಕ್ಷೆಗಳಿಗೆ ಪಕ್ಷದ ತಿರಸ್ಕಾರ

Photo:PTI
ಹೊಸದಿಲ್ಲಿ,ಮಾ.8: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿಜಯವನ್ನು ಭವಿಷ್ಯ ನುಡಿದಿರುವ ಚುನಾವಣೋತ್ತರ ಸಮೀಕ್ಷೆಗಳನ್ನು ಮಂಗಳವಾರ ತಳ್ಳಿಹಾಕಿದ ಬಿಎಸ್ಪಿ ರಾಷ್ಟ್ರೀಯ ವಕ್ತಾರ ಸುಧೀಂದ್ರ ಭದೋರಿಯಾ ಅವರು,ಮಾಯಾವತಿ ನೇತೃತ್ವದ ತನ್ನ ಪಕ್ಷವು ದೊಡ್ಡ ಶಕ್ತಿಯೊಂದಿಗೆ ಜಯಶಾಲಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
‘ಉ.ಪ್ರದೇಶದ ಜನರು ತಮ್ಮ ತೀರ್ಪು ನೀಡಿದ್ದಾರೆ ಮತ್ತು ಮತಗಳು ಇವಿಎಮ್ಗಳಲ್ಲಿ ಭದ್ರವಾಗಿವೆ. ಮಾಯಾವತಿಯವರ ಸಭೆಗಳಿಗೆ ಜನರು ಸೇರಿದ್ದ ರೀತಿಯನ್ನು ನೋಡಿದರೆ ನಮ್ಮ ಪಕ್ಷವು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ನಮಗೆ ವಿಶ್ವಾಸವಿದೆ ’ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಸೋಮವಾರ ಪ್ರಕಟಗೊಂಡ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಮರಳಲಿದೆ ಮತ್ತು ಎಸ್ಪಿ ಎರಡನೇ ಸ್ಥಾನವನ್ನು ಪಡೆಯಲಿದೆ ಎಂಬ ಸಹಮತದ ಭವಿಷ್ಯವನ್ನು ನುಡಿದಿವೆ.
‘ಜನಾಭಿಪ್ರಾಯ ಸಂಗ್ರಹ ಅಥವಾ ಚುನಾವಣೋತ್ತರ ಸಮೀಕ್ಷೆಗಳನ್ನು ನಾವು ನಂಬುವುದಿಲ್ಲ. ನಮ್ಮ ಕಾರ್ಯಕರ್ತರು ಮಾಡಿರುವ ಕೆಲಸವನ್ನು ಮಾತ್ರ ನಾವು ನಂಬುತ್ತೇವೆ ’ಎಂದು ಭದೋರಿಯಾ ಹೇಳಿದರು. ತನ್ನ ಪಕ್ಷವು 300 ಸ್ಥಾನಗಳನ್ನು ಗೆಲ್ಲಲಿದೆ ಎಂಬ ಹೇಳಿಕೆಗಾಗಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವರನ್ನು ಟೀಕಿಸಿದ ಭದೋರಿಯಾ, ಮೊದಲು ಅವರು 400 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿದ್ದರು,ಈಗ 300 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಅವರು ಇನ್ನೂ ಎರಡು ದಿನಗಳನ್ನು ಕಾಯಬೇಕು ಮತ್ತು ಫಲಿತಾಂಶ ಅವರೆದುರು ಇರುತ್ತದೆ ಎಂದರು.







