ರಾಷ್ಟ್ರಪತಿಗಳಿಂದ 29 ಮಹಿಳೆಯರಿಗೆ ‘ನಾರಿ ಶಕ್ತಿ ಪುರಸ್ಕಾರ’ಗಳ ಪ್ರದಾನ

ಹೊಸದಿಲ್ಲಿ,ಮಾ.8: ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಂಗಳವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2020 ಮತ್ತು 2021ರಲ್ಲಿ ಅತ್ಯುತ್ತಮ ಸಾಧನೆಗಳನ್ನು ಪ್ರದರ್ಶಿಸಿರುವ 29 ಮಹಿಳೆಯರಿಗೆ ‘ನಾರಿ ಶಕ್ತಿ ಪುರಸ್ಕಾರ’ಗಳನ್ನು ಪ್ರದಾನಿಸಿದರು.
2020 ಮತ್ತು 2021ಕ್ಕೆ ತಲಾ 14ರಂತೆ ಒಟ್ಟು 28 ಪ್ರಶಸ್ತಿಗಳನ್ನು ಮಹಿಳೆಯರ,ವಿಶೇಷವಾಗಿ ದುರ್ಬಲರು ಮತ್ತು ಶೋಷಿತರ ಸಬಲೀಕರಣಕ್ಕಾಗಿ ಅವರ ಅಸಾಧಾರಣ ಕಾರ್ಯಗಳನ್ನು ಗುರುತಿಸಿ ಪ್ರದಾನಿಸಲಾಗಿದೆ.
ನಾರಿ ಶಕ್ತಿ ಪುರಸ್ಕಾರವು ವ್ಯಕ್ತಿಗಳ ಮತ್ತು ಸಂಸ್ಥೆಗಳ ಅಸಾಧಾರಣ ಕೊಡುಗೆಯನ್ನು ಗುರುತಿಸಲು ಹಾಗೂ ಮಹಿಳೆಯರನ್ನು ಗೇಮ್-ಚೇಂಜರ್‌ಗಳಾಗಿ ಮತ್ತು ಸಮಾಜದಲ್ಲಿ ಧನಾತ್ಮಕ ಬದಲಾವಣೆಗಾಗಿ ವೇಗವರ್ಧಕರನ್ನಾಗಿ ಸಂಭ್ರಮಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪಕ್ರಮವಾಗಿದೆ.
ಉದ್ಯಮಶೀಲತೆ,ಕೃಷಿ,ನವೀನತೆ,ಸಾಮಾಜಿಕ ಕಾರ್ಯ,ಶಿಕ್ಷಣ ಮತ್ತು ಸಾಹಿತ್ಯ,ಭಾಷಾಶಾಸ್ತ್ರ,ಕಲೆ ಮತ್ತು ಕರಕೌಶಲ್ಯ,ವಿಜ್ಞಾನ,ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ),ಅಂಗವಿಕಲರ ಹಕ್ಕುಗಳು,ವಾಣಿಜ್ಯ ನೌಕಾಪಡೆ ಹಾಗೂ ವನ್ಯಜೀವಿ ಸಂರಕ್ಷಣೆಯಂತಹ ಕ್ಷೇತ್ರಗಳಿಗೆ ಸೇರಿದವರಿಗೆ ಈ ಪುರಸ್ಕಾರಗಳನ್ನು ನೀಡಲಾಗುತ್ತದೆ.
ಮಂಗಳವಾರ ಪುರಸ್ಕಾರಕ್ಕೆ ಭಾಜನರಾದವರಲ್ಲಿ ಉದ್ಯಮಿ ಅನಿತಾ ಗುಪ್ತಾ, ಸಾವಯವ ರೈತ ಮಹಿಳೆ ಮತ್ತು ಬುಡಕಟ್ಟು ಕಾರ್ಯಕರ್ತೆ ಉಷಾಬೆನ್ ದಿನೇಶಭಾಯಿ ವಸಾವಾ, ಹೊಸತನದ ಅನ್ವೇಷಕಿ ನಾಸಿರಾ ಅಖ್ತರ್, ಇಂಟೆಲ್ ಇಂಡಿಯಾದ ಮುಖ್ಯಸ್ಥೆ ನಿವೃತಿ ರಾಯ್,ಡೌನ್ ಸಿಂಡ್ರೋಮ್ ಪೀಡಿತ ಕಥಕ್ ನರ್ತಕಿ ಸಾಯಿಲೀ ನಂದಕಿಶೋರ ಅಗವಾನೆ,ಮೊದಲ ಮಹಿಳಾ ಉರಗ ಸಂರಕ್ಷಕಿ ವನಿತಾ ಜಗದೇವ್ ಬೊರಾಡೆ ಮತ್ತು ಗಣಿತಜ್ಞೆ ನೀನಾ ಗುಪ್ತಾ ಸೇರಿದ್ದಾರೆ.
ಸೋಮವಾರ ಈ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯವರು,‘ವೋಕಲ್ ಫಾರ್ ಲೋಕಲ್’ನಂತಹ ಸರಕಾರದ ಪ್ರಯತ್ನಗಳ ಯಶಸ್ಸು ಮಹಿಳೆಯರ ಕೊಡುಗೆಯನ್ನು ಅವಲಂಬಿಸಿದೆ. ಎಲ್ಲ ಮಹಿಳೆಯರು ತಮ್ಮ ಕುಟುಂಬ ಮಟ್ಟದಲ್ಲಿ ನಿರ್ಧಾರ ಕೈಗೊಳುವ ಪ್ರಕ್ರಿಯೆಯ ಭಾಗವಾಗಿರುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಮತ್ತು ಇದು ಅವರ ಆರ್ಥಿಕ ಸಬಲೀಕರಣದಿಂದ ಸಾಧ್ಯವಾಗುತ್ತದೆ ಎಂದು ಹೇಳಿದ್ದರು.







