ಸರಕಾರಿ ಶಾಲಾ ಅಭಿವೃದ್ಧಿ ಮಂಡಳಿಯಲ್ಲಿರುವ ಅವಿವೇಕಿಗಳನ್ನು ಹೊರ ಹಾಕಿ, ವಿದ್ಯಾರ್ಥಿಗಳನ್ನಲ್ಲ!

ಕೊರೋನ ಮತ್ತು ಲಾಕ್‌ಡೌನ್ ದಿನಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಮಕ್ಕಳು ಶಾಲೆ ತೊರೆದಿರುವ ಬಗ್ಗೆ ಜಗತ್ತು ಕಳವಳ ವ್ಯಕ್ತಪಡಿಸುತ್ತಿದೆ. ಅವರನ್ನು ಮತ್ತೆ ಶಾಲೆಗೆ ಕರೆತರುವುದು ಜಗತ್ತಿನ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಭಾರತದಲ್ಲಿ ಕೊರೋನ ಪೂರ್ವದಲ್ಲೇ ವಿದ್ಯಾರ್ಥಿಗಳು ಅರ್ಧದಲ್ಲೇ ಶಿಕ್ಷಣದಿಂದ ಹೊರಗೆ ತಳ್ಳಲ್ಪಡುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಬಡತನ. ಕೊರೋನ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಭಾರತದಲ್ಲಿ ಬಡತನ ತೀವ್ರ ಪ್ರಮಾಣದಲ್ಲಿ ಹೆಚ್ಚಿದ್ದು, ಪರಿಣಾಮವಾಗಿ ಶಾಲೆ ತೊರೆಯುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುವುದನ್ನು ವರದಿಗಳು ಎತ್ತಿ ತೋರಿಸುತ್ತಿವೆ. ಕರ್ನಾಟಕವೂ ಇದಕ್ಕೆ ಹೊರತಲ್ಲ ಎನ್ನುವ ಅಂಶವನ್ನು ಕರ್ನಾಟಕ ಆರ್ಥಿಕ ಸಮೀಕ್ಷೆ ಬಹಿರಂಗಪಡಿಸಿದೆ.
ಸರ್ವಶಿಕ್ಷಣ ಅಭಿಯಾನ, ಮರಳಿ ಬಾ ಶಾಲೆಗೆ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ನಲಿಕಲಿ ಹೀಗೆ ಹತ್ತು ಹಲವು ಯೋಜನೆಗಳನ್ನು ಸರಕಾರ ಹಮ್ಮಿಕೊಂಡದ್ದೇ, ಶಾಲೆಗಳಿಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಆಹ್ವಾನಿಸುವುದಕ್ಕಾಗಿ. ಈ ಆಂದೋಲನಕ್ಕೆ ಸರಕಾರ ಈಗಾಗಲೇ ಕೋಟ್ಯಂತರ ರೂಪಾಯಿಯನ್ನು ವ್ಯಯಿಸಿದೆ. ಆದರೆ ಈ ಎಲ್ಲ ಯೋಜನೆಗಳಿಂದ ವಿದ್ಯಾರ್ಥಿಗಳನ್ನು ಶಾಲೆಗಳಲ್ಲಿ ಉಳಿಸಿಕೊಳ್ಳಲು ಸರಕಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದನ್ನು ಪರಿಶೀಲಿಸಿದಾಗ ನಿರಾಸೆಯಾಗುತ್ತದೆ. ರಾಜ್ಯದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳ ಪ್ರಮಾಣವನ್ನು ಗಮನಿಸಿದಾಗ ಸಂಖ್ಯೆ ಇಳಿಮುಖವಾಗುತ್ತಿರುವ ಲಕ್ಷಣಗಳು ಎದ್ದು ಕಾಣಿಸುತ್ತವೆ. ಕಳೆದ 10 ವರ್ಷಗಳಿಂದ 1, 2 ಮತ್ತು 3ನೇ ತರಗತಿಗೆ ಸೇರ್ಪಡೆಯಾಗುವ ಮಕ್ಕಳ ಪ್ರಮಾಣ ಸಂಪೂರ್ಣ ಸ್ಥಗಿತಗೊಂಡಿದೆ. 2011ರಲ್ಲಿ ಮೊದಲ ಮೂರು ತರಗತಿಗಳಿಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆ 10.8 ಲಕ್ಷವಿದ್ದು, 2016ರಲ್ಲಿ ಇದು 11.6 ಲಕ್ಷಕ್ಕೆ ಏರಿದೆ. ಆದರೆ 2020ರಲ್ಲಿ ಇದರ ಪ್ರಮಾಣ 10.85 ಲಕ್ಷಗಳಿಗೆ ಇಳಿಕೆಯಾಗಿದೆ ಎನ್ನುವುದನ್ನು ಆರ್ಥಿಕ ಸಮೀಕ್ಷೆ ಹೇಳುತ್ತಿದೆ. ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಒಂದನೇ ತರಗತಿಗೆ ಸೇರುವವರ ಸಂಖ್ಯೆಯೇ ಇಳಿಮುಖಗೊಂಡಿದೆ. ಬಡವರ ಸಂಖ್ಯೆ ಹೆಚ್ಚಿದಂತೆಯೇ ಸರಕಾರಿ ಶಾಲೆಗಳಿಗೆ ಸೇರುವವರ ಸಂಖ್ಯೆಯೂ ಹೆಚ್ಚಬೇಕು. ಆತಂಕಕಾರಿ ಅಂಶವೆಂದರೆ ಬಡವರ ಸಂಖ್ಯೆ ಹೆಚ್ಚಿದಂತೆ, ಸರಕಾರಿ ಶಾಲೆಗಳಲ್ಲಿ ಇರುವ ಮಕ್ಕಳು ಶಾಲೆ ತೊರೆಯುತ್ತಿದ್ದಾರೆ. ಅಂದರೆ, ಸರಕಾರದ ಎಲ್ಲ ಯೋಜನೆಗಳು ವಿಫಲಗೊಳ್ಳುವ ಹಂತದಲ್ಲಿದೆ. ಸರಕಾರಿ ಶಾಲೆಗಳಲ್ಲಿ ಮೂಲಭೂತ ವ್ಯವಸ್ಥೆಯ ಕೊರತೆ, ಶಿಕ್ಷಕರ ಕೊರತೆ, ಶಾಲಾ ಕಟ್ಟಡಗಳ ಕೊರತೆ ಇತ್ಯಾದಿಗಳು ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗಲು ಮುಖ್ಯ ಕಾರಣ. ಹಾಗೆಯೇ ಮಧ್ಯಮವರ್ಗದ ಜನರು ಇಂಗ್ಲಿಷ್ ಮಾಧ್ಯಮದ ಮೋಹದಿಂದ ಸಾಲ ಸೋಲ ಮಾಡಿ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಇವುಗಳ ನಡುವೆಯೇ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದನೇ ತರಗತಿಯಿಂದಲೇ ಪೂರ್ಣಪ್ರಮಾಣದಲ್ಲಿ ಕಲಿಸಿ ಈ ಶಾಲೆಗಳನ್ನು ಉಳಿಸಿ, ದುರ್ಬಲರ ಶಿಕ್ಷಣಕ್ಕೆ ಸಹಾಯ ಮಾಡುವ ಅವಕಾಶವಿದೆ. ಆದರೆ ಅದಕ್ಕೆ ಕನ್ನಡ ಪ್ರೇಮಿಗಳು ಎಂದು ಕರೆಸಿಕೊಂಡ ಕೆಲವು ಚಿಂತಕರೇ ಕಲ್ಲು ಹಾಕುತ್ತಿದ್ದಾರೆ. ಸರಕಾರಿ ಶಾಲೆಗಳು ಮುಚ್ಚಿದರೆ ಪರವಾಗಿಲ್ಲ, ಆದರೆ ಅಲ್ಲಿ ಇಂಗ್ಲಿಷ್ ಕಲಿಸಬಾರದು ಎನ್ನುವುದು ಇವರ ವಾದ. ಇಂಗ್ಲಿಷ್ ಕಲಿಸುವುದಕ್ಕೆ ಅರ್ಹ ಶಿಕ್ಷಕರ ಕೊರತೆಯೂ ಸರಕಾರಿ ಶಾಲೆಗಳಲ್ಲಿವೆ. ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿ ಏನು ಕ್ರಮ ತೆಗೆದುಕೊಂಡಿದೆ ಎಂದು ಕೇಳಿದರೆ ಸರಕಾರದ ಬಳಿ ಯಾವ ಉತ್ತರವೂ ಇಲ್ಲ.
ಆದರೆ ಒಂದಂತೂ ನಿಜ. ಇರುವ ವಿದ್ಯಾರ್ಥಿಗಳನ್ನು ಮುಖ್ಯವಾಗಿ ಬಾಲಕಿಯರನ್ನು ಶಾಲೆಯಿಂದ ಹೊರ ಹಾಕುವ ಪ್ರಯತ್ನವಂತೂ ಸರಕಾರದಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಹಿಂದೆಲ್ಲ ಸರಕಾರ ‘ಊಟ ಕೊಡುತ್ತೇವೆ ಶಾಲೆಗೆ ಬನ್ನಿ’ ‘ಉಚಿತ ಸೈಕಲ್ ಕೊಡುತ್ತೇವೆ ಶಾಲೆಗೆ ಬನ್ನಿ’, ‘ಉಚಿತ ಬಟ್ಟೆ ಕೊಡುತ್ತೇವೆ ಶಾಲೆಗೆ ಬನ್ನಿ’ ಎಂದು ಮಕ್ಕಳನ್ನು ಮನವೊಲಿಸುತ್ತಿದ್ದರೆ, ಈ ಸರಕಾರ ‘ತಲೆವಸ್ತ್ರ ಧರಿಸಿಕೊಂಡು ಬಂದರೆ ಶಾಲೆಗೆ ಪ್ರವೇಶವಿಲ್ಲ’ ಎಂದು ರಾಜ್ಯದ ನೂರಾರು ವಿದ್ಯಾರ್ಥಿನಿಯರನ್ನು ಶಾಲೆಗಳಿಂದ, ಕಾಲೇಜುಗಳಿಂದ ಹೊರ ಹಾಕಲು ಮುಂದಾಗಿದೆ. ಇದಕ್ಕಿಂತ ಬುದ್ಧಿಗೇಡಿತನ ಇನ್ನೇನಿದೆ? ಒಂದೆಡೆ ಕರ್ನಾಟಕ ಆರ್ಥಿಕ ಸಮೀಕ್ಷೆ ‘ಒಂದನೇ ತರಗತಿಗೆ ಸೇರಿದ ಎಲ್ಲ ಮಕ್ಕಳು 12ನೇ ತರಗತಿಯನ್ನು ಪೂರೈಸುವ ಹಾಗೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸರಕಾರದ್ದು’ ಎಂದು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಸರಕಾರಿ ಶಾಲೆಗಳ ಉದ್ದೇಶವೇ ಮಕ್ಕಳಿಗೆ ಅದರಲ್ಲೂ ಬಡವರ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡುವುದು. ಅದಕ್ಕೆ ಯಾವ ಅಡ್ಡಿ ಎದುರಾದರೂ ಅದನ್ನು ನಿವಾರಿಸಿ ಅವರು ಶಾಲೆಗೆ ಬರುವಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲ, ಶಾಲೆ ತೊರೆಯದಂತೆ ನೋಡಿಕೊಳ್ಳುವುದು ಕೂಡ ಸರಕಾರದ ಹೊಣೆ. ಆದರೆ ಇದೀಗ ಸರಕಾರದ ನೇತೃತ್ವದಲ್ಲೇ ವಿದ್ಯಾರ್ಥಿಗಳನ್ನು ಶಾಲೆಗೆ ಬರದಂತೆ ಯೋಜನೆ ರೂಪಿಸಲಾಗಿದೆ. ಸಾವಿರಾರು ವಿದ್ಯಾರ್ಥಿನಿಯರು ಸರಕಾರದ ಆದೇಶದಿಂದಾಗಿ ಶಾಲೆಯೊಳಗೆ ಪ್ರವೇಶಿಸಲಾಗದೆ ಶಾಲೆಯ ಗೇಟಿನ ಮುಂದೆ ಅಂಗಲಾಚುವಂತಾಗಿದೆ.
ಹಿಜಾಬ್ ಸರಕಾರವೇ ಸೃಷ್ಟಿಸಿದ ವಿವಾದವಾಗಿದೆ. ಸರಕಾರಿ ಶಾಲೆಗಳೆನ್ನುವುದು ವೈವಿಧ್ಯಮಯ ಹೂದೋಟ. ಅಲ್ಲಿ ಈವರೆಗೆ ತಲೆವಸ್ತ್ರ ಸಮಸ್ಯೆಯಾಗಿರಲಿಲ್ಲ. ಸದ್ಯದ ಸರಕಾರಿ ಶಾಲೆಗಳ ಅಯೋಮಯ ಸ್ಥಿತಿಯ ನಡುವೆ ಸಮವಸ್ತ್ರವೆನ್ನುವುದು ‘ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ’ ಎಂಬಂತಾಗಿದೆ. ಇಂದು ಸರಕಾರಿ ಶಾಲೆಗಳು ಸರ್ವ ಪ್ರಯತ್ನಗಳ ಮೂಲಕ ಹೊರಗಿರುವ ವಿದ್ಯಾರ್ಥಿಗಳನ್ನು ಒಳಗೆ ಸೇರಿಸಬೇಕು. ಆದರೆ ಸರಕಾರಿ ಶಾಲೆಗಳ ಉದ್ದೇಶ, ಶಿಕ್ಷಣದ ಬಗ್ಗೆ ಅಜ್ಞಾನಿಗಳಾಗಿರುವವರೇ ಇಂದು ಸಮವಸ್ತ್ರದ ಹೆಸರಿನಲ್ಲಿ ತಗಾದೆ ಎತ್ತಿದ್ದಾರೆ. ಅಂತಹ ತಗಾದೆ ಎತ್ತಿದ ಅಜ್ಞಾನಿಗಳಿಗೆ ಬುದ್ಧಿ ಹೇಳಬೇಕು ಅಥವಾ ಅವರನ್ನು ಶಾಲೆಯ ಆಡಳಿತ ಮಂಡಳಿಯಿಂದ ಹೊರ ಹಾಕಬೇಕು. ಇದರ ಬದಲು ಸರಕಾರ ವಿದ್ಯಾರ್ಥಿನಿಯರನ್ನೇ ಹೊರ ಹಾಕಲು ಮುಂದಾಗಿರುವುದು, ಕರ್ನಾಟಕದ ಶೈಕ್ಷಣಿಕ ಭವಿಷ್ಯದ ಬಗ್ಗೆ ಆತಂಕ ಪಡುವಂತಾಗಿದೆ.







