ದ.ಕ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಗುಡುಗು, ಮಿಂಚಿನ ಸಹಿತ ಮಳೆ

ಮಂಗಳೂರು, ಮಾ.9: ನಗರ ಮತ್ತು ಹೊರವಲಯದ ಕೆಲವು ಕಡೆ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮುಂಜಾನೆ ಗುಡುಗು, ಮಿಂಚು ಸಹಿತ ಸುಮಾರು ಅರ್ಧ ಗಂಟೆ ಮಳೆಯಾಗಿದೆ. ಉಳ್ಳಾಲ ತಾಲೂಕು ವ್ಯಾಪ್ತಿಯ ದೇರಳಕಟ್ಟೆ, ಕುತ್ತಾರ್ ಸುತ್ತಮುತ್ತ ಬಿರುಸಿನ ಮಳೆಯಾಗಿದ್ದರೆ, ಮಂಗಳೂರು ನಗರ ಮತ್ತಿತರ ಕಡೆ ಸಾಧಾರಣ ಮಳೆಯಾಗಿದೆ.
ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತದಿಂದ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿತ್ತು. ಅದರಂತೆ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮುಂಜಾನೆ ಮಳೆಯಾಗಿದೆ.
ಸಾಮಾನ್ಯವಾಗಿ ಜನವರಿ ಅಂತ್ಯಕ್ಕೆ ಜಿಲ್ಲೆಯಲ್ಲಿ ಚಳಿಯ ವಾತಾವರಣ ಕಡಿಮೆಯಾಗಿರುತ್ತದೆ. ಆದರೆ ಈ ಬಾರಿ ಮಾರ್ಚ್‌ನಲ್ಲೂ ಮುಂಜಾನೆಯ ವೇಳೆಗೆ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಪೂರ್ವಾಹ್ನ 11ರ ಬಿಸಿಲ ವಾತಾವರಣ ತೀವ್ರಗೊಳ್ಳುತ್ತಿದೆ. ಹಾಗಾಗಿ ಮುಂಜಾನೆ ಮಳೆಯಾಗಿದ್ದರೂ ಬಳಿಕ ಬಿಸಿಲು ಆವರಿಸಿತ್ತು.
ಹವಾಮಾನ ಇಲಾಖೆ ಪ್ರಕಾರ ಮಂಗಳೂರಿನಲ್ಲಿ 3 ಸೆಂ.ಮೀ. ಮಳೆ ಸುರಿದಿದೆ. ಉಳಿದಂತೆ ಬಂಟ್ವಾಳ ತಾಲೂಕಿನ ಕೆಲವಡೆ ಮಳೆಯಾಗಿದೆ.
ಉರುಳಿದ ಮರ: ಬುಧವಾರ ಮುಂಜಾನೆಯ ಮಳೆಯ ಮಧ್ಯೆಯೇ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ರೊಝಾರಿಯೊ ಚರ್ಚ್ ರಸ್ತೆ ಬದಿಯ ಮರವೊಂದು ಉರುಳಿದೆ. ಬೆಳಗ್ಗೆ ಸುಮಾರು 9:15ಕ್ಕೆ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯ ಮೇಲೆ ಮರ ಉರುಳಿತು. ಅಪಾಯದ ಮುನ್ಸೂಚನೆ ಅರಿಯ ಲಾರಿಯ ಚಾಲಕ ಪುರುಷೋತ್ತಮ ಲಾರಿಯಿಂದ ಜಿಗಿದು ಅಪಾಯದಿಂದ ಪಾರಾಗಿದ್ದಾರೆ. ಉರುಳಿದ ಮರವು ರಸ್ತೆಯ ಮೇಲೆ ಬಿದ್ದ ಕಾರಣ ಕೆಲಕಾಲ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಮರ ಉರುಳಿದ್ದರಿಂದ ಬಿಎಸ್‌ಎನ್‌ಎಲ್ ಆವರಣ ಗೋಡೆಗೂ ಹಾನಿಯಾಗಿದೆ. ಅಗ್ನಿಶಾಮಕ ದಳ, ಪೊಲೀಸರ ಜೊತೆ ಸಾರ್ವಜನಿಕರು ಮರವನ್ನು ತೆರವುಗೊಳಿಸಲು ಸಹಕರಿಸಿದರು.
ಕರಾವಳಿಯಲ್ಲಿ ಇನ್ನೂ ಎರಡು ದಿನ ಮಳೆ ಮುನ್ಸೂಚನೆ ಇದ್ದು, ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.























