ಜಾಗತಿಕ ಮಾಧ್ಯಮಗಳಿಗೆ ಬಹಿರಂಗ ಪತ್ರ ಬರೆದು ರಶ್ಯದ "ಸಾಮೂಹಿಕ ಹತ್ಯೆ'' ಖಂಡಿಸಿದ ಉಕ್ರೇನ್ ಪ್ರಥಮ ಮಹಿಳೆ

Photo: Wikipedia
ಕೀವ್( ಉಕ್ರೇನ್): ರಷ್ಯಾದ ಆಕ್ರಮಣದ ಕುರಿತು ಜಾಗತಿಕ ಮಾಧ್ಯಮಗಳಿಗೆ ಬಹಿರಂಗ ಪತ್ರ ಬರೆದಿರುವ ಉಕ್ರೇನ್ನ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾ ಮಕ್ಕಳು ಸೇರಿದಂತೆ ನಾಗರಿಕರ “ಸಾಮೂಹಿಕ ಹತ್ಯೆ’’ಯನ್ನು ಖಂಡಿಸಿದ್ದಾರೆ.
ಭಾವನಾತ್ಮಕ ಹೇಳಿಕೆಯಲ್ಲಿ, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು "ನಂಬಲು ಅಸಾಧ್ಯ" ಎಂದು ಝೆಲೆನ್ಸ್ಕಾ ಹೇಳಿದರು.
"ಫೆಬ್ರವರಿ 24 ರಂದು ರಷ್ಯಾದ ಆಕ್ರಮಣದ ಘೋಷಣೆಯಿಂದ ನಾವೆಲ್ಲರೂ ಎಚ್ಚರಗೊಂಡಿದ್ದೇವೆ. ಟ್ಯಾಂಕುಗಳು ಉಕ್ರೇನಿಯನ್ ಗಡಿಯನ್ನು ದಾಟಿದವು, ವಿಮಾನಗಳು ನಮ್ಮ ವಾಯುಪ್ರದೇಶವನ್ನು ಪ್ರವೇಶಿಸಿದವು, ಕ್ಷಿಪಣಿ ಉಡಾವಣೆಗಳು ನಮ್ಮ ನಗರಗಳನ್ನು ಸುತ್ತುವರೆದಿವೆ. ಕ್ರೆಮ್ಲಿನ್ ಬೆಂಬಲಿತ ಪ್ರಚಾರ ಸಂಸ್ಥೆಗಳು ಇದನ್ನು 'ವಿಶೇಷ ಕಾರ್ಯಾಚರಣೆ' ಎಂದು ಕರೆಯುತ್ತಾರೆ. ಇದು ವಾಸ್ತವವಾಗಿ ಉಕ್ರೇನಿಯನ್ ನಾಗರಿಕರ ಸಾಮೂಹಿಕ ಹತ್ಯೆಯಾಗಿದೆ’’ ಎಂದು ಒಲೆನಾ ಝೆಲೆನ್ಸ್ಕಾ ಬರೆದಿದ್ದಾರೆ.
ಒಲೆನಾ ಝೆಲೆನ್ಸ್ಕಾ ಅವರು ಮಕ್ಕಳ ಸಾವುನೋವುಗಳನ್ನು "ಬಹುಶಃ ಅತ್ಯಂತ ಭಯಾನಕ ಮತ್ತು ವಿನಾಶಕಾರಿ" ಎಂದು ಹೇಳಿದರು, ಕೊಲ್ಲಲ್ಪಟ್ಟವರಲ್ಲಿ ಹಲವಾರು ಮಂದಿಯನ್ನು ಹೆಸರಿಸಿದರು.
"ಎಂಟು ವರ್ಷದ ಬಾಲಕಿ ಆಲಿಸ್ ... ಓಖ್ಟಿರ್ಕಾದ ಬೀದಿಗಳಲ್ಲಿ ಸಾವನ್ನಪ್ಪಿದಳು. ಆಕೆಯ ಅಜ್ಜ ಅವಳನ್ನು ರಕ್ಷಿಸಲು ಪ್ರಯತ್ನಿಸಿದರು. ಕೀವ್ ನಿಂದ ಪೋಲಿನಾ ... ತನ್ನ ಹೆತ್ತವರೊಂದಿಗೆ ಶೆಲ್ ದಾಳಿಯಲ್ಲಿ ಮೃತಪಟ್ಟಳು. 14 ವರ್ಷದ ಆರ್ಸೆನಿಯು ಅವಶೇಷಗಳಡಿ ಸಿಲುಕಿ ಮೃತಪಟ್ಟರು. ತೀವ್ರವಾದ ಬೆಂಕಿಯಿಂದಾಗಿ ಆಂಬ್ಯುಲೆನ್ಸ್ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದ ಕಾರಣ ಬಾಲಕನನ್ನು ಉಳಿಸಲಾಗಲಿಲ್ಲ. ನಾಗರಿಕರ ವಿರುದ್ಧ ಯುದ್ಧ ಮಾಡುತ್ತಿಲ್ಲ" ಎಂದು ರಷ್ಯಾ ಹೇಳಿದಾಗ, ನಾನು ಈ ಹತ್ಯೆಗೀಡಾದ ಮಕ್ಕಳ ಹೆಸರನ್ನು ಮೊದಲು ಕರೆಯುತ್ತೇನೆ" ಎಂದು ಅವರು ಹೇಳಿದರು.







