ಬಿಹಾರ ಕ್ರಿಕೆಟ್ ಮುಖ್ಯಸ್ಥರ ವಿರುದ್ಧ ಅತ್ಯಾಚಾರ ಯತ್ನ ಆರೋಪ ಹೊರಿಸಿದ ಮಹಿಳೆ, ಪ್ರಕರಣ ದಾಖಲು

ಹೊಸದಿಲ್ಲಿ: ಕಳೆದ ವರ್ಷ ದಿಲ್ಲಿಯಲ್ಲಿ ಬಾಕಿ ಹಣ ಪಾವತಿಸುವಂತೆ ಕೋರಿ ಬಿಹಾರ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರನ್ನು ತಾನು ಭೇಟಿಯಾದಾಗ ಅವರು ತನ್ನ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದರು ಎಂದು ಜಾಹೀರಾತು ಸಂಸ್ಥೆಯೊಂದರ ನಿರ್ದೇಶಕರು ಆರೋಪಿಸಿದ್ದಾರೆ.
ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿನ ಮೇರೆಗೆ ಬಿಹಾರ ಕ್ರಿಕೆಟ್ ಸಂಸ್ಥೆಯ ಕಾರ್ಯಾಧ್ಯಕ್ಷ ರಾಕೇಶ್ ತಿವಾರಿ ವಿರುದ್ಧ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಹಲ್ಲೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ನಿನ್ನೆ ಎಫ್‌ಐಆರ್ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಕಳೆದ ವರ್ಷ ಜುಲೈನಲ್ಲಿ ಈ ಘಟನೆ ನಡೆದಿತ್ತು. ರವಿವಾರ ಮಹಿಳೆ ದೂರು ನೀಡಿದ್ದು, ಮರುದಿನ ಎಫ್‌ಐಆರ್ ದಾಖಲಾಗಿದೆ.
ಗುರ್‌ಗಾಂವ್‌ನಲ್ಲಿ ವಾಸಿಸುವ ಮಹಿಳೆ ಕಳೆದ ವರ್ಷ ಮಾರ್ಚ್‌ನಲ್ಲಿ ಆಯೋಜಿಸಿದ್ದ ಪಂದ್ಯಾವಳಿಯ ಜಾಹೀರಾತು ಕೆಲಸಕ್ಕಾಗಿ ಬಿಹಾರ ಕ್ರಿಕೆಟ್ ಅಸೋಸಿಯೇಶನ್ ತನ್ನ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕೆಲಸ ಮುಗಿದರೂ ಸಂಘದವರು ತನಗೆ ಹಣ ನೀಡಿಲ್ಲ ಎಂದು ಅವರು ದೂರಿದ್ದಾರೆ.
ಕಳೆದ ವರ್ಷ ಜುಲೈ 12 ರಂದು ರಾಕೇಶ್ ತಿವಾರಿ ದಿಲ್ಲಿಯಲ್ಲಿದ್ದಾಗ ಮಹಿಳೆಯು ಬಾಕಿ ಹಣವನ್ನು ತೀರಿಸಬೇಕೆಂಬ ವಿನಂತಿಯೊಂದಿಗೆ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಈ ವಿಷಯವನ್ನು ಚರ್ಚಿಸಲು ರಾಕೇಶ್ ತಿವಾರಿ ತನ್ನನ್ನು ಪಂಚತಾರಾ ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.







