ಐದು ದಶಕಗಳ ರಾಜಕೀಯ ವೃತ್ತಿಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ ಎ.ಕೆ. ಆ್ಯಂಟನಿ

ಹೊಸದಿಲ್ಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಎ.ಕೆ. ಆ್ಯಂಟನಿ ಅವರು ತಮ್ಮ ರಾಜ್ಯಸಭಾ ಸ್ಥಾನಕ್ಕೆ ಮರು ಆಯ್ಕೆ ಬಯಸುವುದಿಲ್ಲ ಎಂದು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸಿದ್ದಾರೆ. ಎಪ್ರಿಲ್‌ನಲ್ಲಿ ತಮ್ಮ ಅಧಿಕಾರಾವಧಿ ಮುಗಿದ ನಂತರ ತವರು ರಾಜ್ಯವಾದ ಕೇರಳಕ್ಕೆ ಮರಳುವುದಾಗಿ ತಿಳಿಸಿದ್ದಾರೆ.
ಈ ಘೋಷಣೆಯ ಮೂಲಕ ಚುನಾವಣಾ ರಾಜಕೀಯದಲ್ಲಿ ಆ್ಯಂಟನಿಯವರ ಸುಮಾರು 52 ವರ್ಷಗಳ ಸುದೀರ್ಘ ವೃತ್ತಿಜೀವನದ ಅಂತ್ಯ ಕಾಣುವ ಸೂಚನೆ ಲಭಿಸಿದೆ. ಆಂಟನಿ ರಾಜಕೀಯ ಜೀವನದಲ್ಲಿ ತಲಾ ಮೂರು ಬಾರಿ ಕೇಂದ್ರ ಸಚಿವರು ಹಾಗೂ ಕೇರಳದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ಕೇರಳದ ಮೂರು ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ
ಮಂಗಳವಾರ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ 81 ವರ್ಷ ವಯಸ್ಸಿನ ಆ್ಯಂಟನಿ, ರಾಜ್ಯಸಭೆಯಲ್ಲಿ ಪಕ್ಷವನ್ನು ಪ್ರತಿನಿಧಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತನಗೆ ನೀಡಿದ ಅವಕಾಶಗಳಿಗಾಗಿ ಧನ್ಯವಾದ ಹೇಳಿದರು.
ಸಂಸದೀಯ ರಾಜಕೀಯದ ಬಗ್ಗೆ ಸ್ವಲ್ಪ ಸಮಯ ಯೋಚಿಸಿದ ನಂತರ ನಾನು ಎರಡು ತಿಂಗಳ ಹಿಂದೆ ಸೋನಿಯಾ ಜಿ ಅವರಿಗೆ ಮತ್ತೊಮ್ಮೆ ರಾಜ್ಯಸಭೆಯ ಅವಧಿಯನ್ನು ಬಯಸುವುದಿಲ್ಲ ಎಂಬ ನನ್ನ ನಿರ್ಧಾರವನ್ನು ತಿಳಿಸಿದ್ದೇನೆ. ಕಳೆದ ತಿಂಗಳು ಕೇರಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಿಸಿಸಿ ಅಧ್ಯಕ್ಷರು ಹಾಗೂ ಇತರ ಸಹೋದ್ಯೋಗಿಗಳಿಗೆ ಇದೇ ವಿಷಯ ತಿಳಿಸಿದ್ದೆ” ಎಂದು ಕೇರಳದಲ್ಲಿ ಸುದ್ದಿಗೋಷ್ಠಿಯಲ್ಲಿ ಆಂಟನಿ ತಿಳಿಸಿದರು.







