ಫೋಟೊಗ್ರಾಫರ್ ಕೈಚಳಕ: ಮಾಡೆಲ್ ಆಗಿ ಪ್ರಸಿದ್ಧಿ ಪಡೆದ ಬೀದಿಯಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿ !

ತಿರುವನಂತಪುರಂ: ದೇವಸ್ಥಾನದ ಜಾತ್ರೆಯೊಂದರ ವೇಳೆ ಬಲೂನುಗಳನ್ನು ಮಾರಾಟ ಮಾಡುತ್ತಿದ್ದ ಬಾಲೆಯೊಬ್ಬಳು ರಾತ್ರಿ ಬೆಳಗಾಗುವುದರಲ್ಲಿ ಇಂಟರ್ನೆಟ್ ಸೆನ್ಸೇಶನ್ ಆಗಿ ಬಿಟ್ಟಿದ್ದಾಳೆ. ಆಕೆಯ ಫೋಟೋಶೂಟ್ ಚಿತ್ರಗಳು ಈಗ ವೈರಲ್ ಆಗಿವೆ.
ಜನವರಿ 17ರಂದು ಅಂದಲೂರ್ ಕಾವು ಜಾತ್ರೆ ವೇಳೆ ಬಲೂನು ಮಾರಾಟ ಮಾಡುತ್ತಿದ್ದ ಬಾಲಕಿ ಕಿಸ್ಬೂ, ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಅವರ ಗಮನ ಸೆಳೆದಿದ್ದಳು. ತಕ್ಷಣ ಅವರು ಆಕೆಯ ಫೋಟೋಗಳನ್ನು ತೆಗೆದು ಆಕೆ ಮತ್ತು ಆಕೆಯ ತಾಯಿಯ ಅನುಮತಿಯೊಂದಿಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆಯೇ ಆಕೆಗೆ ಫೋಟೋಶೂಟ್ ಒಂದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಈ ಫೋಟೋಶೂಟ್ ಚಿತ್ರಗಳಲ್ಲಿ ಆಕೆಯ ಅಂದ ಹಾಗೂ ಸೊಬಗು ನೆಟ್ಟಿಗರ ಮನಸೂರೆಗೊಂಡಿದೆ.
ಕಿಸ್ಬೂ ಕುಟುಂಬದ ಅನುಮತಿಯೊಂದಿಗೆ ಮೇಕಪ್ ಕಲಾವಿದೆ ರೆಮ್ಯಾ ಪ್ರಾಜುಲ್ ಆಕೆಗೆ ಮ್ಯಾನಿಕ್ಯೂರ್, ಪೆಡಿಕ್ಯೂರ್ ಮತ್ತು ಫೇಶಿಯಲ್ ಮಾಡಿದ್ದರು. ಫೋಟೋಶೂಟ್‍ಗಾಗಿ ಆಕೆ ಸಾಂಪ್ರದಾಯಿಕ ಕಸವು ಸೀರೆ ಹಾಗೂ ಆಭರಣಗಳನ್ನು ಧರಿಸಿದ್ದಾಳೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ಚಿತ್ರಗಳು ಸಾಕಷ್ಟು ಜನರ ಮನಸೂರೆಗೊಂಡಿವೆ. ಮೊನ್ನೆಯಷ್ಟೇ ಕೂಲಿ ಕಾರ್ಮಿಕ ವೃದ್ಧರೋರ್ವರು ಅಧಿಕೃತ ಮಾಡೆಲ್ ಆಗಿ ಆಯ್ಕೆಯಾದ ಫೋಟೊಗಳು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು.








