ಮೇಕೆದಾಟು ಯೋಜನೆ: ತಮಿಳುನಾಡು ಒಪ್ಪಿಗೆ ಅಗತ್ಯವಿಲ್ಲ ಎಂದ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಮಾ. 9: ‘ಕುಡಿಯುವ ನೀರಿನ ಉದ್ದೇಶದ ಮೇಕೆದಾಟು ಅಣೆಕಟ್ಟು ಯೋಜನೆಗೆ ಕರ್ನಾಟಕ, ತಮಿಳುನಾಡು ಜತೆ ಮಾತುಕತೆ ನಡೆಸುವ ಅಗತ್ಯವಿಲ್ಲ ಮತ್ತು ಅವರ ಒಪ್ಪಿಗೆಯೂ ಬೇಕಿಲ್ಲ. ಕೇಂದ್ರ ಸರಕಾರವು ಮಧ್ಯಸ್ಥಿಕೆ ವಹಿಸುವ ಅಗತ್ಯವೂ ಇಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಎಂದು ತಿಳಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಮೇಕೆದಾಟು ಯೋಜನೆ ಕಾನೂನುಬದ್ಧವಾಗಿ ತಮಿಳುನಾಡು ಆಕ್ಷೇಪವೆತ್ತಲು ಸಾಧ್ಯವಿಲ್ಲ, ಅದಕ್ಕೆ ಅವಕಾಶವೂ ಇಲ್ಲ. ಈ ಬಗ್ಗೆ ತಮಿಳುನಾಡು ಜತೆ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂಬ ಅಂಶವನ್ನು ಸದನದ ಗಮನಕ್ಕೆ ತಂದರು.
ಆಕ್ಷೇಪ ಇಲ್ಲ ಎಂದು ತಮಿಳುನಾಡು ಹೇಳಿದೆ: ‘ಸುಪ್ರೀಂ ಕೋರ್ಟ್'ಗೆ ತಮಿಳುನಾಡು ರಾಜ್ಯದ ವಕೀಲರೆ ಪ್ರಮಾಣ ಪತ್ರವನ್ನು ಸಲ್ಲಿಸಿ, ಕಾವೇರಿ ನದಿಯಲ್ಲಿ ತನಗೆ ಹಂಚಿಕೆ ಆಗಿರುವ ನೀರನ್ನು ಕರ್ನಾಟಕ ಹೇಗೆ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು. ಅದಕ್ಕೆ ನಮ್ಮ ತಕರಾರು ಏನು ಇಲ್ಲ. ಅವರು ಬೇಕಾದರೆ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ಇನ್ನೊಂದು ಅಣೆಕಟ್ಟು ಕಟ್ಟಿಕೊಳ್ಳಲಿ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು' ಎಂದು ಅವರು ಉಲ್ಲೇಖಿಸಿದರು.
‘ನಮಗೆ ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ನೆರೆ ರಾಜ್ಯದ ಅಪ್ಪಣೆ ನಮಗೆ ಬೇಕಿಲ್ಲ. ಅಗತ್ಯವಾದರೆ ಮಧ್ಯಪ್ರವೇಶಿಸಿ ಸಂಧಾನ ಮಾತುಕತೆ ನಡೆಸಲು ಸಿದ್ಧ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನೀಡಿರುವ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಯಾವ ಸಂಧಾನ ಅಥವಾ ಮಾತುಕತೆ ಬೇಕಾಗಿಲ್ಲ' ಎಂದು ಹೇಳಿದರು.
ಗೌಡರು ಪರಿಹಾರ ಸೂಚಿಸಿದ್ದರು: ‘ಮೇಕೆದಾಟು ಯೋಜನೆ ಕಾರ್ಯಗತ ಮಾಡುವುದು ಸುಲಭ ಸಾಧ್ಯವಲ್ಲ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಯೋಜನೆಯನ್ನು ಯಾವ ರೀತಿ ಕಾರ್ಯಗತ ಮಾಡಬೇಕು. ಕುಡಿಯುವ ನೀರಿನ ಉದ್ದೇಶಕ್ಕೆ 30.65 ಟಿಎಂಸಿ ನೀರು ತುಂಬುವ 67.16 ಸಂಗ್ರಹಣಾ ಸಾಮಥ್ರ್ಯ ಈ ಯೋಜನೆಯನ್ನು ಒಂದೇ ಹಂತದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದರು' ಎಂದು ತಿಳಿಸಿದರು.
‘ಮೇಕೆದಾಟು ಅಣೆಕಟ್ಟು ಯೋಜನೆಗೆ 1 ಸಾವಿರ ಕೋಟಿ ರೂ.ಮೀಸಲಿಡಲಾಗಿದೆ. ಪಾದಯಾತ್ರೆಗೆ ಹೆದರಿ ಹಣ ಇಟ್ಟಿದ್ದಾರೆಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಆದರೆ ತಮಿಳುನಾಡಿನಲ್ಲಿ ವಿವಿಧ ಪಕ್ಷಗಳು ಯೋಜನೆಯ ವಿರುದ್ಧ ಕ್ಯಾತೆ ತೆಗೆಯುತ್ತಲೇ ಇದ್ದಾರೆ. ಸರಕಾರ ಹೆಚ್ಚಿನ ಶ್ರಮ ಹಾಕಿದರೆ ಮೇಕೆದಾಟು ಕೆಲಸ ಸರಾಗವಾಗಿ ನಡೆಯಲಿದೆ ಎಂದು ಹೇಳಿದರು.
ಆಗ ಜ್ಞಾಪಕಕ್ಕೆ ಬರಲಿಲ್ಲ: ‘ನಮ್ಮ ನೀರು ನಮ್ಮ ಹಕ್ಕು' ಎಂದು ಈಗ ಕೆಲವರು ಪಾದಯಾತ್ರೆ ಹೊರಟಿದ್ದಾರೆ. ಮಹದಾಯಿ ಯೋಜನೆಯನ್ನು ಅನುಷ್ಠಾನಕ್ಕೆ ಆಗ್ರಹಿಸಿ ಗದಗ ಮತ್ತು ನರಗುಂದದಲ್ಲಿ ರೈತರು ಧರಣಿ ನಡೆಸುತ್ತಿದ್ದರು. ರೈತರು, ಮಹಿಳೆಯರು, ಮಕ್ಕಳು ಎನ್ನದೆ ಮನೆ ಮನೆಗೆ ನುಗ್ಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಆಗ ನಿಮಗೆ ‘ನಮ್ಮ ನೀರು ನಮ್ಮ ಹಕ್ಕು' ಎಂಬುದು ಜ್ಞಾಪಕಕ್ಕೇ ಬರಲಿಲ್ಲವೇ? ಎಂದು ಕುಮಾರಸ್ವಾಮಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
‘ರಾಜ್ಯದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ನಾವೇ ಅನುಷ್ಠಾನ ಮಾಡುತ್ತಿದ್ದೇವೆ, ಅಣೆಕಟ್ಟುಗಳನ್ನು ನಾವೇ ಕಟ್ಟಿಸಿದ್ದೇವೆ ಎಂದು ಕೆಲವರು ಹೇಳಿದ್ದಾರೆ. ಅಧಿಕಾರದಲ್ಲಿದ್ದಾಗ ಏನೂ ಮಾಡದೆ ಕೆಲವರು ಪಾದಯಾತ್ರೆ ಹೊರಟ್ಟಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನದ ವಿಚಾರದಲ್ಲಿ ಎಲ್ಲ ಸರಕಾರಗಳು ಕೆಲಸ ಮಾಡಿದ್ದು, ಎಲ್ಲರ ಶ್ರಮವೂ ಇದರಲ್ಲಿದೆ' ಎಂದು ಕುಮಾರಸ್ವಾಮಿ ಹೇಳಿದರು.







