ಮಂಡ್ಯದ ಜನರಿಗೆ ತೊಂದರೆಯಾದರೆ ನಾನು ಸುಮ್ಮನಿರುವುದಿಲ್ಲ: ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ ಸಂಸದೆ ಸಮಲತಾ ಅಂಬರೀಶ್
''ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್‍ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ''

ಮೈಸೂರು,ಮಾ.9: ಮೈಸೂರು-ಬೆಂಗಳೂರು ನಡುವೆ ನಡೆಯುತ್ರಿರುವ ದಶಪಥ ಹೆದ್ದಾರಿ ರಸ್ತೆ ಒಳ್ಳೆಯ ಯೋಜನೆ. ಆದರೆ ಈ ಯೋಜನೆಯಿಂದ ಮಂಡ್ಯದ ಜನರಿಗೆ ತೊಂದರೆಯಾದರೆ ನಾನು ಸುಮ್ಮನಿರುವುದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಗರದ ರೈಲ್ವೆ ನಿಲ್ದಾಣಕ್ಕೆ ಬುಧವಾರ ಭೇಟಿ ನೀಡಿ ರೈಲ್ವೆ ಡಿಆರ್‍ಎಂ ರಾಹುಲ್ ಅಗರ್‍ವಾಲ್ ಅವರೊಂದಿಗೆ ಮಂಡ್ಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೈಸೂರು-ಬೆಂಗಳೂರು ಹೆದ್ದಾರಿ ಒಳ್ಳೆಯ ಪ್ರಾಜೆಕ್ಟ್. ಆದರೆ ಮಂಡ್ಯ ಜನರಿಗೆ ತೊಂದರೆ ಕೊಟ್ಟರೆ ನಾನು ಸುಮ್ಮನಿರಲ್ಲ. ಮೈಸೂರಿನ ಸಂಸದರು ಮಾಧ್ಯಮಗಳಲ್ಲಿ ದಿನ ನಿತ್ಯ ಏನು ಬೇಕಾದರೂ ಹೇಳಬಹುದು. ಆದರೆ ಜನರ ಬಳಿ ಹೋದರೆ ನಿಜವಾದ ಸಮಸ್ಯೆ ಗೊತ್ತಾಗುತ್ತೆ. ಶಿಂಷಾ ನದಿ ಬಳಿ ಹೆದ್ದಾರಿ ಸೇತುವೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಬಾರಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.
ದಶಪಥ ರಸ್ತೆ ಮೈಸೂರಿನಲ್ಲಿ 5 ಕೀ.ಮೀ. ಮಾತ್ರ ಒಳಗೊಂಡಿರುವುದು, ಮಂಡ್ಯ ಜಿಲ್ಲೆಯಲ್ಲಿ 55 ಕಿ.ಮೀ. ಹಾದು ಹೋಗಲಿದೆ. ಈ ಸಂದರ್ಭದಲ್ಲಿ ಇಲ್ಲಿನ ಜನರಿಗೆ ತೊಂದರೆಯಾಗದಂತೆ ರಸ್ತೆ ನಿರ್ಮಾಣ ಮಾಡಬೇಕು, ಸರ್ವೀಸ್ ರಸ್ತೆ ಮತ್ತು ಎತ್ತಿನ ಗಾಡಿ ಓಡಾಡಲು ಸರಿಯಾದ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ತೊಂದರೆಯಾದರೆ ನಾನು ಸುಮ್ಮನಿರುವುದಿಲ್ಲ ಎಂದು ಹರಿಹಾಯ್ದರು.
ಆಯಾ ಕ್ಷೇತ್ರದ ಸಂಸದರು ಆಯಾ ಕ್ಷೇತ್ರದ ಬಗ್ಗೆ ಕೇಳಿದರೆ ಪ್ರತಿಕ್ರಿಯೆ ಸಿಗುತ್ತದೆ. ಬೇರೆ ಊರಿನ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಬೇಕಾದರೂ ಪತ್ರ ಬರೆದಿರಬಹುದು. ಅವರು ಏನು ಬರೆದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ನನ್ನ ಕ್ಷೇತ್ರದ ವಿಚಾರವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಮಾಡಿದ ಕೆಲಸ ಮಾಡೇ ಇಲ್ಲ ಅಂತ ಹೇಳಿದರೆ ನಾನು ಸುಮ್ಮನಿರಲ್ಲ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟರು.
ಮೈಸೂರು- ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್‍ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾನು ಮಾಡಿರುವುದನ್ನು ಇಲ್ಲ ಅಂದಾಗ ಸುಮ್ಮನಿರಲು ಸಾಧ್ಯವಿಲ್ಲ ಜನರು ವಿಶ್ವಾಸ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಕ್ರೆಡಿಟ್ ತೆಗೆದುಕೊಳ್ಳಲು ನಾನು ಮಾಡಲ್ಲ. ನಿಜ ಹೇಳಲು ಭಯ ಏಕೆ ?. ಕ್ರೆಡಿಟ್ ವಾರ್ ಯಾರು ಆರಂಭಿಸುತ್ತಾರೋ ಅವರು ಜವಾಬ್ದಾರಿ ಅರಿಯಬೇಕು. ಸಂಸದರ ಕ್ರೆಡಿಟ್ ಪಡೆಯುವುದಕ್ಕೆ ಏಕೆ ಬರುತ್ತಿದ್ದಾರೋ ಗೊತ್ತಿಲ್ಲ ಎಂದು ತಮ್ಮ ವಿರೋಧಿಗಳಿಗೆ ತಿರುಗೇಟು ನಿಡಿದರು.
ನಾನು ಚುನಾವಣೆಗೆ ಸ್ಪರ್ಧೆ ಮಾಡಿದ ದಿನದಿಂದಲೇ ನನ್ನ ವಿರುದ್ಧ ಮಂಡ್ಯದ ಒಂದು ಪಕ್ಷದ ಶಾಸಕರುಗಳು ಮಾತನಾಡುತ್ತಿದ್ದಾರೆ. ನಾನು ಅದರ ಬಗ್ಗೆ ತಲೆಕೆಡಸಿಕೊಳ್ಳುವುದಿಲ್ಲ, ಜಿಲ್ಲೆಗೆ ಸಂಬಂಧಪಟ್ಟ ವಿಚಾರ ಮಾತ್ರ ನಾನು ಮಾತನಾಡುತ್ತೇನೆ. ನಾನು ಏನೇ ಮಾಡಿದರೂ ವಿರೋಧ ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಾನು ಕೆಲಸ ಮಾಡುತ್ತೇನೆ ಜನ ನನ್ನ ಪರ ಮಾತನಾಡುತ್ತಾರೆ ಅನ್ನೋ ಭಯ ಎಂದು ಸುಮಲತಾ ನುಡಿದರು.
ಉಕ್ರೇನ್ ನಲ್ಲಿ ಯುದ್ಧ ನಡೆಯುತ್ತಿದೆ. ಅಲ್ಲಿಂದ ಕರೆದುಕೊಂಡು ಬರುವುದು ಸುಲಭದ ಪರಿಸ್ಥಿತಿ ಆಗಿರಲಿಲ್ಲ. ಇಲ್ಲಿ ಬಟನ್ ಒತ್ತಿದರೆ ಅಲ್ಲಿ ವಿಮಾನ ಇಳಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಕರೆದುಕೊಂಡು ಬಂದಿದ್ದು ಒಳ್ಳೆಯ ಬೆಳವಣಿಗೆ. ನಮ್ಮ ದೇಶದ ವಿದ್ಯಾರ್ಥಿಗಳು ಮತ್ತು ನಾಗರೀಕರನ್ನು ಕರೆದುಕೊಂಡು ಬಂದಿದ್ದು ಸಂತಸ ತಂದಿದೆ ಎಂದು ಹೇಳಿದರು.







