ಉಡುಪಿ ಜಿಲ್ಲೆಯಲ್ಲಿ ಶೂನ್ಯಕ್ಕಿಳಿದ ಕೋವಿಡ್ ಪಾಸಿಟಿವ್
ಆಸ್ಪತ್ರೆಗಳಲ್ಲೂ ಸೋಂಕಿತರ ಸಂಖ್ಯೆ ಶೂನ್ಯ

ಸಾಂದರ್ಭಿಕ ಚಿತ್ರ
ಉಡುಪಿ, ಮಾ.9: ಜಿಲ್ಲೆಯಲ್ಲಿ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿ ಕೋವಿಡ್-19 ಪಾಸಿಟಿವ್ ಸಂಖ್ಯೆ ಶೂನ್ಯಕ್ಕಿಳಿದಿದೆ. 2020ರ ಮಾರ್ಚ್ ಕೊನೆಯ ವಾರದಲ್ಲಿ ಪ್ರಾರಂಭಗೊಂಡ ಕೊರೋನ ಸಾಂಕ್ರಾಮಿಕ ರೋಗ, ಮೇ ತಿಂಗಳಲ್ಲಿ ವ್ಯಾಪಕವಾಗಿ ಹಬ್ಬತೊಡಗಿದ ಬಳಿಕ 2021ರ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಪಾಸಿಟಿವ್ ಸಂಖ್ಯೆ ಏಕ ಅಂಕಿಗೆ ಇಳಿದಿತ್ತಾದರೂ ಶೂನ್ಯಕ್ಕಿಳಿದಿರಲಿಲ್ಲ. ಹೀಗಾಗಿ ಇದೇ ಮೊದಲ ಬಾರಿ ಜಿಲ್ಲೆಯಲ್ಲಿ ಈ ಸಂಖ್ಯೆ ಶೂನ್ಯಕ್ಕಿಳಿಯಿತು.
ಬುಧವಾರ 1541 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಯಿತಾದರೂ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಉಡುಪಿ ತಾಲೂಕಿನಲ್ಲಿ 1326 ಮಂದಿ, ಕುಂದಾಪುರ ತಾಲೂಕಿನಲ್ಲಿ 131 ಮಂದಿ ಹಾಗೂ ಕಾರ್ಕಳ ತಾಲೂಕಿನಲ್ಲಿ 84 ಮಂದಿಯನ್ನು ಇಂದು ಕೋವಿಡ್ ಸೋಂಕಿಗಾಗಿ ಪರೀಕ್ಷೆಗೊಳಪಡಿಸಲಾಗಿತ್ತು.
ಇದರೊಂದಿಗೆ ಮತ್ತೊಂದು ಗಮನಾರ್ಹ ಸಂಗತಿ ಎಂದರೆ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ. ಕೇವಲ 36 ಮಂದಿ ಸೋಂಕಿತರು ಮಾತ್ರ ಅವರವರ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ನೀಡಿದ ಇಂದಿನ ವೈದ್ಯಕೀಯ ಬುಲೆಟಿನ್ ತಿಳಿಸಿದೆ.
ದಿನದಲ್ಲಿ ನಾಲ್ವರು ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದರೆ, ಚಿಕಿತ್ಸೆಯಲ್ಲಿರುವವರ ಸಂಖ್ಯೆ 36ಕ್ಕಿಳಿದಿದೆ. ಕೊರೋನದಿಂದ ಜ.1ರ ನಂತರ ಪಾಸಿಟಿವ್ ಬಂದವರ ಸಂಖ್ಯೆ 18,421 ಆದರೆ, ಚೇತರಿಸಿಕೊಂಡವರ ಸಂಖ್ಯೆ 18475ಕ್ಕೇರಿದೆ. ಇಂದು ಜಿಲ್ಲೆಯಲ್ಲಿ ಸೋಂಕಿಗೆ ಯಾರೂ ಬಲಿಯಾಗಿಲ್ಲ. ಇದುವರೆಗೆ ಒಟ್ಟು 546 ಮಂದಿ ಕೆವಿಡ್ನಿಂದ ಮೃತಪಟ್ಟ ದಾಖಲೆ ಇದೆ.
3802 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 3802 ಮಂದಿ ಕೋವಿಡ್ ಲಸಿಕೆಯನ್ನು ಪಡೆದಿದ್ದಾರೆ. 60 ವರ್ಷ ಮೇಲಿನ 487 ಹಿರಿಯ ನಾಗರಿಕರು ಸೇರಿದಂತೆ ಒಟ್ಟು 510 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಉಳಿದಂತೆ 104 ಮಂದಿ ಮೊದಲ ಡೋಸ್ ಹಾಗೂ 3188 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15-18 ವರ್ಷದೊಳಗಿನ 54 ಮಂದಿ ಮೊದಲ ಡೋಸ್ ಹಾಗೂ 1389 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.