ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ: ಜಲತಜ್ಞ ರಾಜೇಂದ್ರ ಸಿಂಗ್

ಬೆಂಗಳೂರು, ಮಾ.9: ರಾಜ್ಯ ಸರಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಾದರೆ, ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಅದರ ಬದಲಾಗಿ, ಇರುವ ನೀರಿನ ಮೂಲಗಳನ್ನು ವಿಕೇಂದ್ರೀಕರಿಸಿ ಉತ್ತಮವಾಗಿ ನಿರ್ವಹಣೆ ಮಾಡಿದಾಗ ನೀರಿನ ಅಭಾವ ತಗ್ಗುತ್ತದೆ ಎಂದು ಪರಿಸರವಾದಿ, ಜಲತಜ್ಞ ರಾಜೇಂದ್ರ ಸಿಂಗ್ ಹೇಳಿದ್ದಾರೆ.
ಬುಧವಾರ ನಗರದ ಪ್ರೆಸ್ ಕ್ಲಬ್‍ನಲ್ಲಿ ಕರ್ನಾಟಕ ನೆಲಜಲ ಪರಿಸರ ರಕ್ಷಣಾ ಸಮಿತಿ ಆಯೋಜಿಸಿದ್ದ ಮೇಕೆದಾಟು ಪರ, ಅಣೆಕಟ್ಟು ವಿರುದ್ಧ ಎಂಬ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊಸ ಅಣೆಕಟ್ಟುಗಳನ್ನು ಕಟ್ಟುವುದರಿಂದ ಯಾವುದೇ ಪ್ರಯೋಜವಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರ ಕೂಡ ಜನಸಾಮಾನ್ಯರ ಪರವಾಗಿ ಯೋಚನೆ ಮಾಡುತ್ತಿಲ್ಲ. ಬದಲಾಗಿ ಅಂಬಾನಿ, ಅದಾನಿಯಂತಹ ಶ್ರೀಮಂತರ ಪರವಾಗಿ ನಿಂತಿವೆ ಎಂದು ಹೇಳಿದರು.
ನದಿಗಳ ಸುತ್ತಮುತ್ತ ಇರುವ ಜಾಗವನ್ನು ಭೂ ಮಾಫಿಯಾ ನುಂಗಿ ನೀರು ಕುಡಿದು ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಹಾಳಾಗಿದೆ. ಇದಕ್ಕೆ ಈಗಿನ ವ್ಯವಸ್ಥೆ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ಹೋರಾಟಗಾರ, ನಟ ಚೇತನ್ ಮಾತನಾಡಿ, ನಾನು ಮೊದಲಿನಿಂದಲೂ ಮೇಕೆದಾಟು ಪರವಾಗಿದ್ದೇನೆ. ಆದರೆ, ಅಣೆಕಟ್ಟು ಕಟ್ಟುವುದರ ಬಗ್ಗೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಕೃಷಿಗೆ ಮತ್ತು ಕುಡಿಯುವ ನೀರಿಗೆ ಸರಕಾರಗಳು ಮಳೆಯ ನೀರಿಗೆ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸಿ ಇರುವ ಜಲಸಂಪನ್ಮೂಲವನ್ನು ವೈಜ್ಞಾನಿಕವಾಗಿ ಪೋಲಾಗದಂತೆ ತಡೆದು ಅವುಗಳಿಗೆ ಸರಿಯಾದ ರೂಪ ಕೊಟ್ಟರೆ ಸರಕಾರಕ್ಕೆ ಯಾವ ಅಣೆಕಟ್ಟುಗಳು ಅವಶ್ಯಕತೆ ಇರುವುದಿಲ್ಲ. ಬೆಂಗಳೂರಿನಲ್ಲಿ ಇರುವ ಕಾವೇರಿ ನೀರನ್ನು ನಾವು ಸರಿಯಾಗಿ ಸದುಪಯೋಗ ಪಡೆದುಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ನಗರದ ಸಣ್ಣ, ಪುಟ್ಟ ಕೆರೆಗಳಲ್ಲಿ ನೀರನ್ನು ಶೇಖರಿಸಿ, ಮಳೆ ನೀರನ್ನು ಅಲ್ಲೇ ಇಂಗುವಂತೆ ಮಾಡಿದರೆ ಅಂತರ್ಜಲ ವೃದ್ಧಿಯಾಗಿ ಜಲ ಅಭಾವ ದೂರವಾಗಲಿದೆ ಎಂದು ಸಲಹೆ ನೀಡಿದರು.
ಮೇಕೆದಾಟು ಅಣೆಕಟ್ಟು ಕಟ್ಟಿದರೆ ಆ ಪ್ರದೇಶದ ಜೀವಸಂಕುಲಕ್ಕೆ ಹೊಡೆತ ಬೀಳಲಿದೆ. ಹಾಗೂ ಅಲ್ಲಿ ವಾಸಿಸುತ್ತಿರುವ ಅನೇಕ ಹಳ್ಳಿಗಳ ಜನರ ಜೀವನ ಬೀದಿಪಾಲಾಗಲಿದೆ. ಇದು ತಿಳಿದಿದ್ದರೂ ರಾಜ್ಯ ಸರಕಾರ ಯೋಜನೆಯನ್ನು ತರಲೆಬೇಕೆಂದು ಬಜೆಟ್‍ನಲ್ಲಿ ಈಗಾಗಲೇ 1 ಸಾವಿರ ಕೋಟಿ ರೂ.ಘೋಷಿಸಿದೆ. ಎಂದಿಗೂ ಈ ಯೋಜನೆ ಜಾರಿಗೆ ಬರಲು ನಾವು ಬಿಡುವುದಿಲ್ಲ. ರಾಜಕೀಯ ಲಾಭಕ್ಕಾಗಿ ಹೊರಟವರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಪರಿಸರ ಚಿಂತಕ ನಾಗೇಶ ಹೆಗಡೆ ಮಾತನಾಡಿ, ಬೆಂಗಳೂರು ಕೆರೆಗಳ ಹೂಳನ್ನು ಎತ್ತುವ ಮೂಲಕ ಅಂತರ್ಜಲವನ್ನು ಹೆಚ್ಚಿಸಬೇಕು. ಕೊಳಚೆ ನೀರನ್ನು ಶುದ್ಧೀಕರಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಟಿ.ಲಲಿತಾನಾಯಕ್ ಉಪಸ್ಥಿತರಿದ್ದರು.
ಮೇಕೆದಾಟು ಅಣೆಕಟ್ಟು ಕಟ್ಟುವುದಕ್ಕೆ ವಿರೋಧವಿದೆ
‘ಹೊಸದಾಗಿ ಮೇಕೆದಾಟು ಅಣೆಕಟ್ಟು ಕಟ್ಟುವುದರ ಬಗ್ಗೆ ನಮ್ಮ ವಿರೋಧವಿದೆ. ಅಣೆಕಟ್ಟು ಕಟ್ಟಿದರೆ ಅಲ್ಲಿನ ಅರಣ್ಯ ಪ್ರದೇಶ ನಾಶವಾಗಿ ಜೀವಸಂಕುಲಕ್ಕೆ ಹೊಡೆತ ಬೀಳಲಿದೆ ಹಾಗೂ ಅಲ್ಲಿ ವಾಸಿಸುತ್ತಿರುವ ಅನೇಕ ಹಳ್ಳಿಗಳ ಜನರ ಜೀವನ ಬೀದಿಪಾಲಾಗಲಿದೆ.’
-ಚೇತನ್, ನಟ, ಸಾಮಾಜಿಕ ಹೋರಾಟಗಾರ
.jpg)







