ಅತ್ತೂರು ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸಿದ ಕೆಮ್ಮಣ್ಣುವಿನ ಗ್ಲೆನ್ವಿಲ್

ಉಡುಪಿ, ಮಾ.9: ಉಕ್ರೇನ್‌ನಿಂದ ಬುಧವಾರ ಬೆಳಗ್ಗೆ ಸುರಕ್ಷಿತವಾಗಿ ತಾಯ್ನಿಡಿಗೆ ತಲುಪಿರುವ ಉಡುಪಿ ತಾಲೂಕಿನ ತೋನ್ಸೆ ಗ್ರಾಮದ ಕೆಮ್ಮಣ್ಣುವಿನ ವಿದ್ಯಾರ್ಥಿ ಗ್ಲೆನ್ವಿಲ್ ಮ್ಯಾಕ್ವಿಲ್ ಫೆರ್ನಾಂಡಿಸ್, ತಂದೆ ತಾಯಿಯ ಹರಕೆಯಂತೆ ಅತ್ತೂರು ಚರ್ಚಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಯುದ್ಧಪೀಡಿತ ಉಕ್ರೇನ್‌ನಲ್ಲಿ ಬಹಳಷ್ಟು ಆತಂಕದ ಸ್ಥಿತಿಯಲ್ಲಿದ್ದ ಗ್ಲೆನ್ವಿಲ್ ಸುರಕ್ಷಿತವಾಗಿ ಭಾರತಕ್ಕೆ ಬಂದರೆ ಅತ್ತೂರು ಚರ್ಚಿಗೆ ಭೇಟಿ ನೀಡುವುದಾಗಿ ಅವರ ತಂದೆ ಮೆಲ್ವಿನ್ ಫೆರ್ನಾಂಡಿಸ್ ಹಾಗೂ ತಾಯಿ ಐಡಾ ಫೆರ್ನಾಂಡಿಸ್ ಹರಕೆ ಹೊತ್ತಿದ್ದರು. ಅದರಂತೆ ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಇಳಿದ ಗ್ಲೆನ್ವಿಲ್, ತನ್ನ ಹೆತ್ತವರ ಜೊತೆ ನೇರವಾಗಿ ಅತ್ತೂರು ಚರ್ಚಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅವರು ಕೆಮ್ಮಣ್ಣುವಿನಲ್ಲಿರುವ ತಮ್ಮ ಮನೆಗೆ ತಲುಪಿದ್ದಾರೆ.
ಗ್ಲೆನ್ವಿಲ್ ಯುದ್ಧ ಆರಂಭಕ್ಕೆ ಮೊದಲು ಕೇವಲ 10 ದಿನಗಳ ಹಿಂದೆಯಷ್ಟೆ ಎಂಬಿಬಿಎಸ್ ಶಿಕ್ಷಣಕ್ಕಾಗಿ ಉಕ್ರೇನ್‌ಗೆ ತೆರಳಿದ್ದರು. ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಗ್ಲೆನ್ವಿಲ್ ಸರಿಯಾದ ಮಾರ್ಗದರ್ಶನ ಇಲ್ಲದೆ ಎರಡು ವಾರಗಳಿಗೂ ಅಧಿಕ ದಿನ ಅಲ್ಲೇ ಉಳಿದುಕೊಂಡಿದ್ದನು. ಜಿಲ್ಲೆಯ ಏಳು ವಿದ್ಯಾರ್ಥಿಗಳ ಪೈಕಿ ಗ್ಲೆನ್ವಿಲ್ ಕೊನೆಯವರಾಗಿ ಭಾರತಕ್ಕೆ ಆಗಮಿಸಿದ್ದಾರೆ.