ಮಾ.20ರಂದು ಮರವಂತೆಯಲ್ಲಿ ರಾಜ್ಯಮಟ್ಟದ ಜಲಜಾನಪದೋತ್ಸವ
ಉಡುಪಿ, ಮಾ.9: ಕನ್ನಡ ಜಾನಪದ ಪರಿಷತ್ ಬೆಂಗಳೂರು ಇದರ ಕರಾವಳಿ ವಿಭಾಗೀಯ ಘಟಕದ ವತಿಯಿಂದ ಇದೇ ಮೊದಲ ಬಾರಿಗೆ ವಿಶಿಷ್ಟವಾದ ರಾಜ್ಯಮಟ್ಟದ ಜಲಜಾನಪದೋತ್ಸವವನ್ನು ಮಾ.20ರಂದು ರವಿವಾರ ಮರವಂತೆಯ ರಾಷ್ಟ್ರೀಯ ಹೆದ್ದಾರಿ 66ಎ ಸಮುದ್ರ ಕಿನಾರೆಯ ಸಮೀಪ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಜಾನಪದವು ವಿವಿಧ ಶಾಖೆಗಳಲ್ಲಿ ಗುರುತಿಸಲ್ಪಡುತ್ತಿದೆ. ಇದರ್ಲಿ ಸಸ್ಯ ಜಾನಪದ, ಪ್ರಾಣಿ ಜಾನಪದ, ಅಗ್ನಿ ಜಾನಪದ, ಜಲ ಜಾನಪದ, ರಂಗೋಲಿ ಜಾನಪದ, ಭೂಮಿ ಜಾನಪದ ಹೀಗೆ ಹಲವು ಶಾಖೆಗಳನ್ನು ಗುರುತಿಸಬಹು ದಾಗಿದೆ ಎಂದರು.
ಕನ್ನಡ ಜಾನಪದ ಪರಿಷತ್ ನೆಲಮೂಲ ಸಂಸ್ಕೃತಿ, ಜಾನಪದದ ಮರುಚಿಂತನೆಗೆ ಪ್ರಯತ್ನ ನಡೆಸುತ್ತಿದೆ. ನೆಲಮೂಲ ಕಲೆ, ಸಾಹಿತ್ಯ, ಸಂಸ್ಕೃತಿ ಇಂದಿನ ತಂತ್ರಜ್ಞಾನಕ್ಕೂ ಹೊಂದಿಕೊಂಡು ವಿವಿಧ ರೂಪಗಳಲ್ಲಿ ಬೆಳೆಯುತ್ತಿದೆ. ತಂತ್ರಜ್ಞಾನದ ಈ ಯುಗದಲ್ಲಿ ಜನಪದ ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವುದು ದೊಡ್ಡ ಸವಾಲಾಗಿದೆ ಎಂದರು.
ಜಾನಪದ ಪರಿಷತ್ ಕಳೆದ ಏಳು ವರ್ಷಗಳಲ್ಲಿ ಸರಕಾರದ ಯಾವುದೇ ಬೆಂಬಲವಿಲ್ಲದೇ 4,500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಿದೆ. 12 ರಾಜ್ಯ ಸಮ್ಮೇಳನ, ರಾಜ್ಯ ಗೊರವರ ಸಮ್ಮೇಳನ, ರಾಜ್ಯ ಜೋಗಿ ಸಮ್ಮೇಳನ, ರಾಜ್ಯ ಸುಡುಗಾಡು ಸಿದ್ಧರ ಸಮ್ಮೇಳನದ ಜೊತೆಗೆ ರಾಜ್ಯಮಟ್ಟದ ಗಾದೆ, ಒಗಟು ಹಾಗೂ ಒಡಪು ಸ್ಪರ್ಧೆಗಳನ್ನು ಸಹ ಹಮ್ಮಿಕೊಂಡಿದೆ ಎಂದು ವಿವರಿಸಿದರು.
ಇದೀಗ ಪ್ರಾಕೃತಿಕ ಸೌಂದರ್ಯದ ಮರವಂತೆ ಕಡಲ ಕಿನಾರೆಯಲ್ಲಿ ಇದೇ ಮೊದಲ ಬಾರಿ ಜಲಜಾನಪ ದೋತ್ಸವ ಮಾ.20ರಂದು ನಡೆಯಲಿದೆ.ಒಂದು ದಿನದ ಜನಜಾನಪದೋತ್ಸವ, ಅಂದು ಬೆಳಗ್ಗೆ 8 ಗಂಟೆಗೆ ಜಾನಪದೀಯ ವಾದ ಸಮುದ್ರ ಪೂಜೆ, ಜಲ ಪೂಜೆಯೊಂದಿಗೆ ಪ್ರಾರಂಭಗೊಳ್ಳಲಿದೆ. 9:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕಾ ಸಚಿವ ಎಸ್.ಅಂಗಾರ ಉತ್ಸವನ್ನು ಉದ್ಘಾಟಿಸುವರು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶಾಸಕ ಸುಕುಮಾರ್ ಶೆಟ್ಟಿ ಸಹ ಪಾಲ್ಗೊಳ್ಳುವರು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಜನಪದ ಕಲಾ ಪ್ರದರ್ಶನ, ಕೊಂಕಣ ಖಾರ್ವಿ ಸಮುದಾಯದ ಗುಮಟೆ ನೃತ್ಯ, ಕೋಲಾಟ, ಸ್ಥಳೀಯ ಕೊರಗತನಿಯ ಕಲಾತಂಡದ ಕಲಾವೈಭವ ಪ್ರದರ್ಶನ ನಡೆಯಲಿದೆ. ವಿವಿಧ ಜಿಲ್ಲೆಗಳ ಜನಪದ ಕಲಾತಂಡಗಳ ಪ್ರದರ್ಶನ, ಜಲಜಾನಪದ ವಿಚಾರ ಗೋಷ್ಠಿಯೂ ನಡೆಯಲಿದೆ. ಸಂಜೆ 4:00ಗಂಟೆಗೆ ಸಮಾರೋಪ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಕನರಾಡಿ ವಾದಿರಾಜ ಭಟ್, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ನಿಕೇತನ, ಸಂಚಾಲಕಿ ಡಾ.ಭಾರತಿ ಮರವಂತೆ, ದಕ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪ್ರಶಾಂತ್ ಕುಮಾರ್, ಉಕ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪ್ರಕಾಶ್ ನಾಯಕ್ ಮುಂತಾದವರಿದ್ದರು.







