ಪೆಪ್ಸಿ,ನೆಟ್ಫ್ಲಿಕ್ಸ್ ಸೇರಿದಂತೆ ರಶ್ಯದಲ್ಲಿ ಕಾರ್ಯನಿರ್ವಹಣೆ ಸ್ಥಗಿತಕ್ಕೆ 300ಕ್ಕೂ ಅಧಿಕ ಸಂಸ್ಥೆಗಳ ನಿರ್ಧಾರ

photo pti
ವಾಷಿಂಗ್ಟನ್, ಮಾ.9: ಉಕ್ರೇನ್ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ರಶ್ಯದ ವಿರುದ್ಧ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು, ಕಳೆದ 2 ವಾರದಲ್ಲಿ ಪ್ರತಿಷ್ಟಿತ ಬಹುರಾಷ್ಟ್ರೀಯ ಸಂಸ್ಥೆಗಳ ಸಹಿತ 300ಕ್ಕೂ ಅಧಿಕ ಸಂಸ್ಥೆಗಳು ರಶ್ಯದಲ್ಲಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ ಎಂದು ಅಮೆರಿಕದ ಯೇಲ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ವರದಿ ಮಾಡಿದೆ.
ಐಷಾರಾಮಿ ವಾಚ್ಗಳನ್ನು ನಿರ್ಮಿಸುವ ರೋಲೆಕ್ಸ್, ಮೆಕ್ಡೊನಾಲ್ಡ್ಸ್, ಫಿಝಾ ಹಟ್, ಕೋಕಾ-ಕೋಲಾ, ಪೆಪ್ಸಿ, ಸ್ಟಾರ್ಬಕ್ಸ್, ನೆಟ್ಫ್ಲಿಕ್ಸ್, ಟಿಕ್ಟಾಕ್, ಸ್ಯಾಮ್ಸಂಗ್, ವಿಸಾ, ಮಾಸ್ಟರ್ಕಾರ್ಡ್, ಅಮೆರಿಕನ್ ಎಕ್ಸ್ಪ್ರೆಸ್, ಜನರಲ್ ಮೋಟರ್ಸ್, ಫೋರ್ಡ್ ಮೋಟರ್, ವೋಕ್ಸ್ವೇಗನ್ ಎಜಿ, ಟೊಯೊಟಾ ಮೋಟರ್ಸ್, ವೋಲ್ವೊ, ಶೆಲ್, ಯುನಿಲಿವರ್, ಮೈಕ್ರೊಸಾಫ್ಟ್, ಆ್ಯಪಲ್ ಸಹಿತ 300ಕ್ಕೂ ಅಧಿಕ ಸಂಸ್ಥೆಗಳು ರಶ್ಯದಲ್ಲಿನ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ. ಹಾಲಿವುಡ್ನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಗಳಾದ ವಾಲ್ಟ್ ಡಿಸ್ನಿ, ಪ್ಯಾರಾಮೌಂಟ್ ಪಿಕ್ಚರ್ಸ್, ಸೋನಿ ಕಾರ್ಪೊರೇಶನ್ ಇತ್ಯಾದಿಗಳು ರಶ್ಯದಲ್ಲಿ ಸಿನೆಮ ಬಿಡುಗಡೆಯನ್ನು ಸ್ಥಗಿತಗೊಳಿಸಿದೆ.
ಈ ಮಧ್ಯೆ, ರಶ್ಯದ ತೈಲ ಮತ್ತು ಇಂಧನ ಆಮದಿಗೆ ಅಮೆರಿಕ ನಿಷೇಧ ವಿಧಿಸಿರುವುದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಮತ್ತಷ್ಟು ಏರಿಕೆಯಾಗಿದೆ. ಫೆಬ್ರವರಿ 24ರಂದು ಉಕ್ರೇನ್ ಮೇಲಿನ ರಶ್ಯದ ಆಕ್ರಮಣ ಆರಂಭವಾದಂದಿನಿಂದ ತೈಲ ದರದಲ್ಲಿ ಸುಮಾರು 30% ಏರಿಕೆಯಾಗಿದೆ. ವಿಶ್ವದಲ್ಲಿ ಅತ್ಯಧಿಕ ಕಚ್ಛಾತೈಲ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ರಶ್ಯ 2ನೇ ಸ್ಥಾನದಲ್ಲಿದೆ. ರಶ್ಯದ ತೈಲ ಆಮದನ್ನು ಈ ವರ್ಷಾಂತ್ಯದ ವೇಳೆಗೆ ಹಂತ ಹಂತವಾಗಿ ಕಡಿಮೆಗೊಳಿಸುವುದಾಗಿ ಬ್ರಿಟನ್ ಘೋಷಿಸಿದೆ. ರಶ್ಯದ ಅನಿಲ(ಗ್ಯಾಸ್)ಮೇಲಿನ ಅವಲಂಬನೆಯನ್ನು ಈ ವರ್ಷ ಮೂರನೇ ಎರಡು ಪ್ರಮಾಣದಷ್ಟು ಕಡಿತಗೊಳಿಸುವುದಾಗಿ ಯುರೋಪಿಯನ್ ಯೂನಿಯನ್ ಹೇಳಿದೆ.





